ಪರಿಸರ ವಿಜ್ಞಾನ -
	ಜೀವಿಗಳು ಮತ್ತು ಅವುಗಳ ಪರಿಸರ (ಆಗ್ರ್ಯಾನಿಸ್ಮ್ಸ್ ಅಂಡ್ ದೇರ್ ಎನ್‍ವೈರನ್‍ಮೆಂಟ್) ಇವುಗಳ ಸಂಬಂಧಗಳನ್ನು ಅಭ್ಯಸಿಸುವ ವಿಜ್ಞಾನ (ಇಕಾಲಜಿ). ಸಂಕುಚಿತಾರ್ಥದಲ್ಲಿ ಜೀವಿಗಳ ಅಂತರ ಸಂಬಂಧಗಳನ್ನು ಕುರಿತೂ ಈ ಪದದ ಬಳಕೆ ಇದೆ. ಜೀವವಿಜ್ಞಾನದ ಒಂದು ಅಂಗ. ಪರಿಸರವಿಜ್ಞಾನದ ಎರಡು ಪ್ರಮುಖಭಾಗಗಳು ಪ್ರಾಣಿ ಪರಿಸರವಿಜ್ಞಾನ (ಆನಿಮಲ್ ಇಕಾಲಜಿ) ಮತ್ತು ಸಸ್ಯಪರಿಸರಸವಿಜ್ಞಾನ (ಪ್ಲಾಂಟ್ ಇಕಾಲಜಿ). ಮಾನವ ಪರಿಸರವಿಜ್ಞಾನವನ್ನು (ಹ್ಯೂಮನ್ ಇಕಾಲಜಿ) ಪ್ರಾಣಿ ಪರಿಸರವಿಜ್ಞಾನದಿಂದ ಪ್ರತ್ಯೇಕವಾಗಿ ಅಭ್ಯಸಿಸುವುದೂ ಇದೆ. ಮೇಲೆ ಹೇಳಿದ ಎರಡು ಪ್ರಮುಖ ಭಾಗಗಳಲ್ಲಿ ಒಂದೊಂದನ್ನೂ ಎರಡು ಉಪಭಾಗಗಳಾಗಿ ವಿಭಾಗಿಸಿದೆ: ಸ್ವಂತಾವರಣವಿಜ್ಞಾನ (ಆಟಿಕಾಲಜಿ)-ಒಂದೊಂದು ಜೀವಿ ಮತ್ತು ಅದರ ಪರಿಸರ ಇವನ್ನು ಕುರಿತ ಅಭ್ಯಾಸ ಸಮುದಾಯಾವರಣವಿಜ್ಞಾನ (ಸೈನಿಕಾಲಜಿ)-ನಿರ್ದಿಷ್ಟ ಪ್ರದೇಶದಲ್ಲಿರುವ ಜೀವಿಸಮುದಾಯ ಮತ್ತು ಅವುಗಳ ಪರಿಸರ ಇವನ್ನು ಕುರಿತ ಅಭ್ಯಾಸ. ಇವುಗಳ ಪೈಕಿ ಸಮುದಾಯಾವರಣವಿಜ್ಞಾನದ ದೃಷ್ಟಿಯೇ ಉತ್ತಮವಾದದ್ದು. 

	ಮೂಲ ಚೈತನ್ಯ (ಅಥವಾ ಪ್ರಾಣ) ಎಲ್ಲ ವಿಧದ ಜೀವಿಗಳಿಗೂ (ಪ್ರಾಣಿಗಳು, ಸಸ್ಯಗಳು) ಒಂದೇ. ಆದರೆ ಅದು ಅಭಿವ್ಯಕ್ತವಾಗುವ ಬಗೆ ಬೇರೆ ಬೇರೆ. ಇಲ್ಲಿ ಪರಿಸರದ ಪ್ರಭಾವ ಸಾಕಷ್ಟು ಇದೆ. ಜೀವ ವಿಕಾಸ ನೆಲ, ನೀರು, ಗಾಳಿ ಈ ಮೂರು ಪ್ರದೇಶಗಳಲ್ಲಿಯೂ ಆಗಿರುವುದು-ಇಲ್ಲೆಲ್ಲ ಆಯಾ ಪರಿಸರಕ್ಕೆ ಹೊಂದಿ ಜೀವಿಗಳ ವಿವಿಧ ಅವಯವಗಳು ರೂಪುಗೊಂಡಿರುವುದನ್ನು ನೋಡಬಹುದು. ಇಂಥ ಸಂಬಂಧದ ಅಭ್ಯಾಸ ಪರಿಸರವಿಜ್ಞಾನ. 

	ಪರಿಸರ : ಒಂದು ಜೀವಿಯ ಅಥವಾ ಜೀವಿಸಮುದಾಯದ ಮೇಲೆ ಪ್ರಭಾವಕಾರಿಯಾಗುವ ಸಕಲ ಬಾಹ್ಯ ಬಲಗಳ ಅಥವಾ ನಿಯಮಗಳ ಮೊತ್ತ. ಆದರೂ ಈ ಪದದ ಹಿಂದಿರುವ ಭಾವನೆ ಬಲು ಸಂಕೀರ್ಣವಾದದ್ದು. ಆದ್ದರಿಂದ ಪರಿಸರ ಎಂದರೆ ಇಂತಿಷ್ಟು ಬಲಗಳು, ಅಥವಾ ಇಂತಿಷ್ಟು ಪ್ರಭಾವಗಳ ಸಮುದಾಯ ಎಂದು ವಿಶ್ಲೇಷಿಸುವುದು ಬಲು ಕಷ್ಟವೂ ಹೌದು ದೋಷಪೂರತವೂ ಹೌದು. ಆದರೂ ವಿಜ್ಞಾನದ ಪರಿಭಾಷೆಯಲ್ಲಿ ಒಂದು ಜೀವಿ ಒಂದು ನಿರ್ದಿಷ್ಟ ಸ್ಥಳದ ನಿವಾಸಿ. ಇಲ್ಲಿ ನಿವಾಸಿ ಪದದ ವ್ಯಾಪ್ತಿ ಆ ಜೀವಿ ಬದುಕಿರುವ ಪರಿಸರದಬಲ ನಿಯಮಗಳಿಗೆ ಅನ್ವಯಿಸುತ್ತದೆ. ಅನುಕೂಲತೆಗಾಗಿ ಅಭ್ಯಾಸದ ಸೌಕರ್ಯಕ್ಕಾಗಿ ಈ ಬಲನಿಯಮಗಳನ್ನು ಭೌತ (ಫಿಸಿಕಲ್-ಹವೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ), ರಾಸಾಯನಿಕ (ಕೆಮಿಕಲ್) ಮತ್ತು ಜೈವಿಕ (ಬಯಲಾಜಿಕಲ್) ಎಂಬ ಮೂರು ಭಾಗಗಳಾಗಿ ವಿಭಾಗಿಸಬಹುದು. 

	ಸರಿಯಾದ ಆಹಾರವನ್ನು ಯೋಗ್ಯಕಾಲದಲ್ಲಿ ಪಡೆದು ಬದುಕುವುದು ಜೀವಿಯ ಧರ್ಮ. ಜೀವಿಗೆ ಪರಿಸರದಿಂದ ಆಹಾರ ಲಭ್ಯವಾಗುತ್ತದೆ. ಆದರೆ ಪರಿಸರದ ಮೇಲೆ ಪ್ರಭಾವ ಬೀರಲಾಗದ ಜೀವಿ ಪರಿಸರಕ್ಕೆ ಅನುಗುಣವಾಗಿ ಹೊಂದಿಕೊಂಡರೆ ಮಾತ್ರ ಬದುಕಬಲ್ಲುದು. ಈ ನಿರಂತರ ಹೊಂದಾಣಿಕೆ ಅತ್ಯಾಶ್ಚರ್ಯಕರವಾಗಿ ಜೀವಿಗಳ ವಿಕಾಸದ ಮೇಲೆ ಪರಿಣಾಮ ಬೀರಿದೆ. ಕಾಲಾಂತರದಲ್ಲಿ ಜೀವಿಸಮುದಾಯಗಳಿಂದ ಪರಿಸರದ ಮೇಲೆಯೂ ಪ್ರಭಾವ ಉಂಟಾಗಿದೆ. 

	ಪರಿಸರವಿಜ್ಞಾನದ ಅಭ್ಯಾಸದಲ್ಲಿ ನಾಲ್ಕು ಮೂಲ ಅಂಗಗಳನ್ನು ಗುರುತಿಸಬಹುದು. 

	1. ನಿರ್ಜೀವ ವಸ್ತುಗಳು : ಇವು ಮೂಲತಃ ಸಾವಯವ ಮತ್ತು ನಿರವಯವ ಮಿಶ್ರಣಗಳು - ನೀರು, ಕಾರ್ಬನ್ ಡೈಆಕ್ಸೈಡ್, ಆಕ್ಸಿಜನ್, ಕ್ಯಾಲ್ಸಿಯಂ, ನೈಟ್ರೊಜನ್, ಫಾಸ್ಫರಸ್, ಅಮೈನೊ ಆಮ್ಲ ಮುಂತಾದುವುಗಳು ಸೇರ್ಪಡೆಯಿಂದ ಆದವು. ಇವೆಲ್ಲ ಪದಾರ್ಥಗಳೂ ನೀರಿನಲ್ಲಿ ಕರಗಿದ್ದರೂ ಸಾವಯವ ಪದಾರ್ಥಗಳಾಗಿ ಸಿಗುತ್ತವೆ. ಆದರೆ ಇವು ಅಧಿಕ ಪ್ರಮಾಣದಲ್ಲಿ ನೀರಿನ ಕೆಳಭಾಗದ ಬದಿಯಲ್ಲಿಯೋ ಅಥವಾ ಜೀವಿಗಳಲ್ಲಿಯೋ ತುಂಬಿರುತ್ತವೆ. 

	2. ಉಪಯೋಜಕ ಜೀವಿಗಳು: ನೀರಿನ ಹೊಂಡದಲ್ಲಿ ಸಾಮಾನ್ಯವಾಗಿ ಎರಡು ರೀತಿಯ ಉತ್ಪಾದಕ ಜೀವಿಗಳನ್ನು ಗುರುತಿಸಬಹುದು. ಕೆಳದರ್ಜೆಯ ಸಸ್ಯಗಳ ಗುಂಪಿಗೆ ಸೇರಿದ ಪಾಚಿ ಇತ್ಯಾದಿ ಸೂಕ್ಷ್ಮ	ತೇಲುವ ಜೀವಿಗಳು ಒಂದು ರೀತಿಯವು. ಆಳವಾದ ನೀರಿನಲ್ಲಿ ಸಿಗುವ ದೊಡ್ಡಬೇರಿನ ಅಥವಾ ತೇಲುವ ಸಸ್ಯಗಳು ಎರಡನೆಯ ರೀತಿಯವು. ಒಂಟಿಯಾಗಿ ಪಾಚಿ ತುಂಬ ಚಿಕ್ಕದಾಗಿದ್ದರೂ ಒಟ್ಟಿನಲ್ಲಿ ಈ ಸಸ್ಯಸಮುದಾಯ ಜೀವ ಪರಿಸ್ಥಿತಿ ಪದ್ಧತಿಯಲ್ಲಿ ಪ್ರಮುಖ ಸ್ವಪೌಷ್ಟಿಕಾಂಶವೆನಿಸಿದೆ.       

ಚಿತ್ರ-1

	3. ಬಳಕೆದಾರ ಜೀವಿಗಳು : ಮೀನು, ಕ್ರಿಮಿಕೀಟಗಳ ಡಿಂಬಗಳು ಮತ್ತು ವಲ್ಕವಂತ ಪ್ರಾಣಿಗಳು ಉಪಯೋಜಕ ಪ್ರಾಣಿಗಳ ಕೂಟಕ್ಕೆ ಸೇರುತ್ತವೆ. ಮೂಲ ಉಪಯೋಜಕ ಸಸ್ಯಜೀವಿಗಳು. ಅವು ಸಸ್ಯಶೇಷಗಳಿಂದ ನೇರವಾಗಿ ಆಹಾರ ಪಡೆಯುತ್ತವೆ. ಎರಡನೆಯ ಗುಂಪಿನ ಉಪಯೋಜಕ ಜೀವಿಗಳು ಮಾಂಸಾಹಾರಿಗಳು. ಇವು ಪ್ರಥಮ ಉಪಯೋಜಕಗಳನ್ನೇ ಆಹಾರವಾಗಿ ಪಡೆದು ಜೀವಿಸುತ್ತವೆ. 

4. ವಿಘಟಕ (ಡೀಕಂಪೊಸಿûಷನ್) ಜೀವಿಗಳು: ಇವು ಏಕಾಣುಜೀವಿಗಳು ಮತ್ತು ಅಣಬೆಗಳು. ಹೊಂಡದ ತುಂಬ ಇವು ತುಂಬಿದ್ದರೂ ತಳದ ಮಣ್ಣಿನ ಮೇಲ್ಪದರದಲ್ಲಿ ವಿಶೇಷವಾಗಿ ಕಂಡುಬರುತ್ತವೆ. ಹೆಚ್ಚಾಗಿ ಕೊಳೆತ ಜೀವರಹಿತ ಸಾವಯವ ಅವಶೇಷಗಳನ್ನು ಮಾತ್ರ ಆಕ್ರಮಿಸುತ್ತವೆ. ಉತ್ಪಾದಕ ಜೀವಿಗಳು ಪುನಃ ಉಪಯೋಗಿಸಬಹುದಾದ ಅತ್ಯಾವಶ್ಯಕ ಪದಾರ್ಥಗಳನ್ನು ಇವುಗಳ ಕ್ರಿಯೆ ಹೊರಗೆಡಹುತ್ತದೆ. 

	ಸಂತುಲನ (ಹೋಮಿಯೊಸ್ಟೆಸಿಸ್): ಪ್ರತಿಯೊಂದು ಜೀವಿಯಲ್ಲಿ ಸದಾ ಒಂದೇ ಸ್ಥಿತಿಯಲ್ಲಿರುವ ಪರಿಸರದ ಹೆಸರು ಸಂತುಲನ. ಪರಿಚಲನೆ ಮತ್ತು ವಿಸರ್ಜನೆಗಳಿಂದ ಈ ಒಂದು ಸಮತೋಲಸ್ಥಿತಿ ಏರ್ಪಡುತ್ತದೆ. ಆದರೆ ಇದನ್ನು ವಿರೋಧಿಸುವ ಅಂಶಗಳು ಬಾಹ್ಯಾವರಣದಲ್ಲಿವೆ. ಪೌಷ್ಟಿಕಾಂಶಗಳ ಸಂಗ್ರಹಣೆ, ವಿಸರ್ಜನೆ, ಮತ್ತು ಸಾವಯವ ಪದಾರ್ಥಗಳ ಉತ್ಪತ್ತಿ, ವಿಘಟನೆ ಇವನ್ನು ಜೀವಿಯ ದೇಹದಲ್ಲಿರುವ ಸಂಕೀರ್ಣ ಯಾಂತ್ರಿಕ ಕ್ರಿಯೆ ಹತೋಟಿಯಲ್ಲಿಟ್ಟುಕೊಳ್ಳುತ್ತದೆ. ವಿಘಟನೆಯ ನಡುವೆ ವಾತಾವರಣಕ್ಕೆ ವಿಸರ್ಜಿಸಲ್ಪಟ್ಟ ಸಾವಯದ ಪದಾರ್ಥಗಳು ಇತರ ಜೀವಿಗಳ ಬೆಳೆವಣಿಗೆಗಳ ಮೇಲೆ ವಿಶಿಷ್ಟವಾದ ಪರಿಣಾಮಗಳನ್ನು ಬೀರುತ್ತವೆ. ಈ ಪದಾರ್ಥಗಳ ಒಟ್ಟು ಹೆಸರು ವಾತಾವರಣದ ಪ್ರಚೋದಕಸ್ರಾವ. ವಾಸ್ತವವಾಗಿ ಅನೇಕ ವಿಘಟಣೆಗಳ ನಿಷ್ಪ್ರಯೋಜಕ ಉತ್ಪನ್ನಗಳು ಆಹಾರ ಪದಾರ್ಥಗಳಿಗಿಂತ ವಿಶೇಷವಾಗಿ ರಾಸಾಯನಿಕ ನಿಯಂತ್ರಕಗಳು (ರೆಗ್ಯುಲೇಟರ್ಸ್). ಇಂಥ ನಿಯಂತ್ರಕಗಳು ಬಹುಶಃ ಜೀವಪರಿಸ್ಥಿತಿ ಕ್ರಮದ ವಿವಿಧ ಅಂಗಗಳನ್ನು ಸರಿಹೊಂದಿಸುವ ಯಾಂತ್ರಿಕ ಕ್ರಿಯೆಗಳನ್ನು ಒದಗಿಸುವುದರಲ್ಲಿಯೂ ಒದಗಬಹುದಾದ ಭಿನ್ನ ಜಾತಿಗಳ ಯಶಸ್ಸಿಗೂ ಇರುವ ಸಮತೋಲದ ನಿರ್ವಹಣೆಗೂ ಹೊಣೆಯಾಗುತ್ತವೆ. 

	ಜೀವಿ ಪರಿಸರಕ್ಕೆ ಹೊಂದಿಕೊಳ್ಳುವ ಕ್ರಮದ ಹೆಸರು ಹೊಂದಾಣಿಕೆ. ಇದರಲ್ಲಿ ಅನೇಕ ಅನುಸರಣೆಗಳಿವೆ. ಜೀವಿಗಳಲ್ಲಿ ಆಶ್ಚರ್ಯಕರವಾದ ಸ್ಥಿತಿಸ್ಥಾಪಕ ಶಕ್ತಿಯೂ ನಷ್ಟದಿಂದ ಚೇತರಿಸಿಕೊಳ್ಳುವ ಸಾಮಥ್ರ್ಯವೂ ಕಂಡುಬರುತ್ತವೆ. ಆದರೆ ಮನುಷ್ಯ ತನ್ನ ಜೀವವಾತಾವರಣವನ್ನು ಎಷ್ಟರಮಟ್ಟಿಗೆ ಪರಿವರ್ತಿಸಿಕೊಳ್ಳಬಲ್ಲನೆಂದರೆ ಅವು ಒಮ್ಮೊಮ್ಮೆ ಸರಿಪಡಿಸಲಾರದಷ್ಟು ಅಪಾಯವನ್ನು ತಂದೊಡ್ಡಬಲ್ಲ. ಉದಾಹರಣೆಗೆ ಗ್ರಾಮಸಾರದ ಕೊಳಕು ನೀರನ್ನು ಒಂದು ಗೊತ್ತಾದ ಪ್ರಮಾಣದಲ್ಲಿ ಹರಿಯುವ ನೀರಿಗೆ ಬಿಟ್ಟರೆ ಆ ಮಿಶ್ರ ಪ್ರವಾಹ ಕೆಲವೇ ಮೈಲಿಗಳಷ್ಟು ದೂರ ಪ್ರವಹಿಸುವುದರಲ್ಲಿ ಚೇತರಿಸಿಕೊಳ್ಳಬಹುದು. ಆದರೆ ಈ ಕೊಳಕು ಬೆರಕೆ ಅತಿಯಾದರೆ ಯಾವುದೇ ನೈಸರ್ಗಿಕ ವ್ಯವಸ್ಥೆಯೂ ಅದನ್ನು ಸರಿಪಡಿಸಲಾರದು. ಪ್ರವಾಹವೂ ಮತ್ತು ಅದರ ಜೀವಲೋಕವೂ ಪರಿಹರಿಸಲಾಗದಷ್ಟು ಅಪಾಯಕ್ಕೆ ಗುರಿಯಾಗುತ್ತದೆ. 

	ಪ್ರಕೃತಿಯಲ್ಲಿ ಜೀವಿ-ಭೌತ-ರಾಸಾಯನಿಕ ಚಕ್ರಗಳು : ಪದಾರ್ಥಗಳ ಪುನರಾವರ್ತನೆಯೇ ಜೀವಾವರಣ ಪದ್ಧತಿಯಲ್ಲಿ ಸಂತುಲನಕ್ಕೆ ಭಾಗಶಃ ಕಾರಣ. ಎಲ್ಲ ರಾಸಾಯನಿಕ ಮೂಲಾಂಶಗಳೂ ಮೂಲ ಜೀವದ್ರವ್ಯಗಳಿಗೆ ಅಗತ್ಯವಾದ ಅಂಗಗಳೂ ಸೇರಿ ಪರಿಸರದಿಂದ ಜೀವಿಗಳಿಗೆ ಅಲ್ಲಿಂದ ಪುನಃ ಪರಿಸರಕ್ಕೆ ಸಾಗುತ್ತಿರುವ ಸ್ವಭಾವ ಹೊಂದಿದೆ. ಈ ವಿಶಿಷ್ಟ ಮಾರ್ಗಗಳನ್ನು ಜೀವಿ-ಭೌತ-ರಾಸಾಯನಿಕ ಚಕ್ರಗಳೆಂದು ಕರೆಯುತ್ತಾರೆ. ಪ್ರಕೃತಿಯಲ್ಲಿ ಒದಗಿ ಬರುವ ನೂರಾರು ಮೂಲಾಂಶಗಳಲ್ಲಿ 30 ಅಥವಾ 40ರಷ್ಟು ಜೀವಿಗಳಿಗೆ ಆವಶ್ಯಕವಾಗಿವೆ. ಕೆಲವು (ಎಂದರೆ ಕಾರ್ಬನ್, ಹೈಡ್ರೊಜನ್, ಆಕ್ಸಿಜನ್ ಮತ್ತು ನೈಟ್ರೊಜನ್) ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಾಗಿವೆ. ಇತರ ಅಂಶಗಳು ಅಲ್ಪ ಪ್ರಮಾಣದಲ್ಲಿದ್ದರೆ ಸಾಕು. ಕಾರ್ಬನನ್ನು ಹೊಂದಿರುವ ಕೆಲವು ಚಕ್ರಗಳು ಪದಾರ್ಥಗಳನ್ನು ಪರಿಸರಕ್ಕೆ ಎಷ್ಟು ವೇಗವಾಗಿ ಹೊರಗೆಡಹುತ್ತವೋ ಅಷ್ಟೇ ವೇಗವಾಗಿ ಮರಳಿ ಪಡೆಯುತ್ತವೆ. ಅಷ್ಟು ಪರಿಪೂರ್ಣವಲ್ಲದ ಇತರ ಚಕ್ರಗಳು ನಷ್ಟಹೊಂದಿದ ರಾಸಾಯನಿಕಾಂಶಗಳನ್ನು ಭಾಗಶಃ ಒದಗಿಸಬಹುದು ಇಲ್ಲವೆ ಯಾವುದಾದರೂ ರೂಪದಲ್ಲಿ ಅಥವಾ ಜೀವಾಣುಗಳಿಗೆ ಎಟುಕಿಸದ ಸ್ಥಳಗಳಲ್ಲಿ ಉಳಿದುಕೊಂಡಿರಬಹುದು. 

	ಜೀವಪರಿಸ್ಥಿತಿ ಪದ್ಧತಿಯಲ್ಲಿ ನೈಟ್ರೊಜನ್ ಮತ್ತು ಕಾರ್ಬನ್, ಫಾಸ್ಫರಸ್ ಇವು ಮೂರು ಚಕ್ರಗೊಳ್ಳುವ ಅಂಶಗಳು. 

	ನೈಟ್ರೊಜನ್ನಿನ ಚಕ್ರಗಳು: ವಿಘಟಕ ಜೀವಿಗಳಿಂದ ನೈಟ್ರೊಜನ್ ಇನಾಗ್ರ್ಯಾನಿಕ್ ರೂಪಕ್ಕೆ ಪರಿವರ್ತನೆಗೊಳ್ಳಬಹುದು. ಇದರಿಂದ ಕೆಲವು ನೈಟ್ರೊಜನ್ನುಗಳು ನೈಟ್ರೇಟುಗಳಾಗುತ್ತವೆ. ಇವನ್ನು ಸಾಮಾನ್ಯವಾಗಿ ಹಸುರು ಗಿಡಗಳು ಉಪಯೋಗಿಸುತ್ತವೆ, ಅಂಥ ನೈಟ್ರೊಜನ್ನುಗಳು ಸಸ್ಯದ ಮೂಲ ಭಾಗಗಳಾಗಿದ್ದರೆ ಚಕ್ರ ಹಾಗೆಯೇ ಪೂರ್ಣವಾಗುತ್ತದೆ. 

ಚಿತ್ರ-2

	ಆಗ್ರ್ಯಾನಿಕ್ ನೈಟ್ರೊಜನ್ನಿನ ಬಹುಭಾಗ ನೈಟ್ರೊಜನ್ ಒಳಗೊಂಡ ವಸ್ತುವಿನ ವಿಭಜನ ಕ್ರಿಯೆಯ ಫಲವಾಗಿ ಗಾಳಿಯನ್ನು ಮತ್ತೆ ಪ್ರವೇಶಿಸುತ್ತದೆ. ವಾಯುಮಂಡಲದ ನೈಟ್ರೊಜನ್‍ಗೆ ಜೀವಾಣುವಿನೊಡನೆ ಬೆರೆಯುವ ನೈಟ್ರೊಜನ್ ಕ್ರಿಯೆಯ ಮೂಲಕವಾಗಿ ಅಥವಾ ನೀಲಿ ಹಸುರಿನ ಪಾಚಿ (ಆಲ್ಗೆ) ಅಥವಾ ಮಿಂಚಿನ ಕ್ರಿಯೆಯ ಮೂಲಕವಾಗಿ ಹಿಂತಿರುಗುತ್ತದೆ. ಪೌಷ್ಟಿಕ ಪದಾರ್ಥಗಳು ನೈಟ್ರೊಜನ್ ಅಂಶಗಳಾಗಿ ಪರಿವರ್ತನೆ ಆಗುವಾಗ ವಿಭಜನೆಗೊಳ್ಳುವ ಆಗ್ರ್ಯಾನಿಕ್ ಪದಾರ್ಥಗಳು ಶಕ್ತಿಯನ್ನು ಒದಗಿಸುತ್ತವೆ. ಹೀಗೆ ವಿಭಜನೆಗೊಂಡು ಹಿಂದಿರುಗುವ ಆಗ್ರ್ಯಾನಿಕ್ ಪದಾರ್ಥಗಳು ಸಾವಯವಾಂಶ ಅಥವಾ ಸೂರ್ಯನ ಶಕ್ತಿಯನ್ನು ಗಳಿಕೆಗಾಗಿ ಬಳಸಿಕೊಳ್ಳಬೇಕು. ಹುರುಳಿ ಕುಟುಂಬದ (ಲೆಗ್ಯೊಮಿನಸ್) ಸಸ್ಯದ ಬೇರಿನ ಗಂಟುಗಳಲ್ಲಿನ ಜೀವಾಣುಗಳು ಆತಿಥೇಯನಿಂದ ಶಕ್ತಿ ಸಂವರ್ಧನಕ್ಕಾಗಿ ಶರ್ಕರ ಪಿಷ್ಟಾದಿಗಳನ್ನು ಸ್ವೀಕರಿಸುತ್ತವೆ. ಇದರೊಡನೆ ಈ ಜೀವಾಣುಗಳು ಮಣ್ಣಿನಲ್ಲಿರುವ ನೈಟ್ರೊಜನ್ನನ್ನು ಪಡೆಯುತ್ತವೆ. ನೈಟ್ರೊಜನ್ನಿನ ಕೆಲವು ಭಾಗ ಮಣ್ಣಿಗೆ ಇಳಿದು ಬಂದು ಇತರ ಸಸ್ಯಗಳ ಉಪಯೋಗಕ್ಕೆ ದೊರೆಯುತ್ತದೆ. ಇತರ ನೈಟ್ರೊಜನ್ನಿಗೆ ಬೆರೆಯುವ ಜೀವಾಣುಗಳು ಮಣ್ಣಿನಲ್ಲಿ ಸ್ವತಂತ್ರವಾಗಿರುತ್ತವೆ. ಇವುಗಳಿಗೆ ನಾಳ ರಚನೆಯ ಸಸ್ಯಗಳ ಸಹಾಯ ಅನಗತ್ಯ. ನೀರಿನಲ್ಲಿ ಮತ್ತು ನೀಲಿ ಹಸುರಿನ ಪಾಚಿ ಮಾದರಿಯ ಕೆಸರು ಮಣ್ಣಿನಲ್ಲಿ ನೈಟ್ರೊಜನ್ನನ್ನು ಸೇರಿಸಲು ಸಾಮಥ್ರ್ಯ ಹೊಂದಿವೆ. ಸಮಗ್ರಪ್ರದೇಶವನ್ನು ಪರಿಶೀಲನೆಗೆ ತೆಗೆದುಕೊಂಡಾಗ ಅಲ್ಲಿ ನೈಟ್ರೊಜನ್ ಚಕ್ರ ಪೂರ್ಣವಾಗಿರುವುದು ಕಂಡುಬರುತ್ತದೆ. 

	ಆಕ್ಸಿಜನ್, ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರಿನ ಚಕ್ರಗಳು : ಇವು ನೈಟ್ರೊಜನ್ ಚಕ್ರದಂತೆಯೇ ಬಹುತೇಕ ಸಮಾನವಾಗಿರುತ್ತವೆ. ಅಂದರೆ ಇನಾಗ್ರ್ಯಾನಿಕ್ಕಿನಿಂದ ಆಗ್ರ್ಯಾನಿಕ್ ಸ್ಥಿತಿಗಳ ಅಂತರದಲ್ಲಿ ಸತತವಾಗಿ ಪ್ರವಹಿಸುವಾಗ ಅನಿಲ ರೂಪದಲ್ಲಿರುವ ವರೆಗೆ ಮಾತ್ರ ವಾಯುಮಂಡಲದ ಕಾರ್ಬನ್ ಡೈ ಆಕ್ಸೈಡ್ ಹಸುರು ಸಸ್ಯಗಳಿಂದ ಶರ್ಕರ ಪಿಷ್ಟವಾಗಿ ಸೇರುತ್ತವೆ. ಈ ಕ್ರಿಯೆಯಲ್ಲಿ ಆಕ್ಸಿಜನ್ ಒಂದು ಉಪಪದಾರ್ಥವಾಗಿ ಉತ್ಪತ್ತಿಯಾಗುತ್ತದೆ. 

ಚಿತ್ರ-3

 ವಾಯುಮಂಡಲದಲ್ಲಿನ ಆಕ್ಸಿಜನ್ ಆಹಾರ ಪದಾರ್ಥಗಳ ಉತ್ಕರ್ಷಣೆಯ (ಆಕ್ಸಿಡೈಸ್) ಸಂದರ್ಭದಲ್ಲಿ ಜೀವಿಗಳಲ್ಲಿ ಬಳಕೆಯಾಗುತ್ತದೆ. ಆಗ ಅನಗತ್ಯವಾದ ಪದಾರ್ಥವಾಗಿ ಕಾರ್ಬನ್ ಡೈ ಆಕ್ಸೈಡ್ ಹೊರಬರುತ್ತದೆ. ಹಾಗೆಯೇ ಗಾಳಿಯಲ್ಲಿರುವ ಹಬೆ ರೂಪದ ನೀರಿನ ದ್ರವ ಕಣಗಳು ಭೂಮಿಗೆ ಮಳೆಯಾಗಿಯೋ ಮಂಜಾಗಿಯೋ ಬೀಳುತ್ತವೆ. ಜೀವಿಗಳು ನೀರನ್ನು ತಮ್ಮ ಜೀವದ್ರವ್ಯ ಪರಿಣಾಮದಅವಸ್ಥೆಯಲ್ಲಿ ಉಪಯೋಗಿಸಿಕೊಳ್ಳುತ್ತವೆ. 

ಚಿತ್ರ-4

 ಅಲ್ಲದೆ ಆಹಾರಸಂಯೋಜನೆಯಲ್ಲಿ ಅವನ್ನು ನಿರರ್ಥಕ ಪದಾರ್ಥಗಳಾಗಿ ಹೊರಹಾಕುತ್ತವೆ. ನೀರೂ ಕೂಡ ಅಕೃತಿ ಬೆರಕೆಯ ಉಪಪದಾರ್ಥವಾಗಿ ಗಾಳಿಗೆ ಬಂದು ಸೇರಿಕೊಳ್ಳುತ್ತದೆ. 

	ಫಾಸ್ಪರಸ್ ಚಕ್ರ : ಫಾಸ್ಫರಸನ್ನು ಒಳಗೊಂಡಿರುವ ಚಕ್ರ ಸ್ವಲ್ಪ ಅಪರಿಪೂರ್ಣ ಮತ್ತು ಸುಲಭಸ್ವರೂಪದ್ದಾಗಿದೆ. ಫಾಸ್ಫರಸಿನ ನಿಧಿಗಳೆಂದರೆ ಬಂಡೆಗಳು ಇಲ್ಲವೆ ಪ್ರಾಚೀನ ಭೂಗರ್ಭ ಕಾಲದಲ್ಲಿ ರೂಪುಗೊಂಡ ಇತರ ನಿಧಿಗಳು. ಇವು ಸಾಮಾನ್ಯವಾಗಿ ನಶಿಸಿ ಪರಿಸರಕ್ಕೆ ಫಾಸ್ಫರಸ್ ದ್ರವ್ಯಗಳನ್ನು ಹೊರಗೆಡಹುತ್ತವೆ. ಅವುಗಳಲ್ಲಿ ಹೆಚ್ಚಿನ ಭಾಗಗಳು ಸಮುದ್ರಕ್ಕೆ ನುಸುಳಿ ಹೋಗಿ ಸಾಗರದ ಕೆಸರಿನ ಭಾಗವಾಗಿ ಪರಿಣಮಿಸುತ್ತವೆ. ಆದರೆ ಫಾಸ್ಫರಸನ್ನು ಚಕ್ರಗೆ ಹಿಂತಿರುತಿಸುವ ವಿಭಾಗಗಳು ಅವುಗಳ ನಷ್ಟಕ್ಕೆ ಸರಿದೊಗಿಸುವಷ್ಟು ಸಮತೂಕವಾಗಿ ಒದಗುತ್ತಿಲ್ಲ. ಕೆಲವು ಪಕ್ಷಿಗಳ ಮೂಲಕ ಸಮುದ್ರದಿಂದ ನೆಲಕ್ಕೆ ಫಾಸ್ಫರಸನ್ನು ವರ್ಗಾಯಿಸುವುದು ಸಾಧ್ಯ. ಉದಾಹರಣೆಗೆ ಪೆರು ಸಮುದ್ರ ತೀರದಲ್ಲಿ ಕೂಡುವ ಹಿಕ್ಕೆ ಗೊಬ್ಬರ ಫಾಸ್ಫರಸಿನ ಪ್ರಮುಖ ಮೂಲವನ್ನು ಪ್ರತಿನಿಧಿಸುತ್ತದೆ. ಆದರೂ ನೀರುಹಕ್ಕಿಗಳ ಮತ್ತು ಮೀನಿನ ಕ್ರಿಯೆ ಈ ಕಾರ್ಯದಲ್ಲಿ ಸಾಕಷ್ಟಿಲ್ಲ. 

ಚಿತ್ರ-5

 ಭೂಮಿಗೆ ನೀರುಹಕ್ಕಿಗಳು ಮತ್ತು ಮೀನುಗಳಿಂದ ಸುಮಾರು 60,000 ಟನ್ ಪ್ರಮಾಣದ ಪ್ರಾಥಮಿಕ ಫಾಸ್ಫರಸ್ ಪ್ರತಿ ವರ್ಷ ಬರುತ್ತದೆ. ಆದರೆ ಒಂದು ಎರಡು ಕೋಟಿ ಟನ್ ಫಾಸ್ಫರಸ್ ಬಂಡೆಗಳನ್ನು ಅಗೆದು ತೆಗೆದು ಅವನ್ನು ಗೊಬ್ಬರಕ್ಕೆ ಉಪಯೋಗಿಸುತ್ತಾರೆ. ಆದರೆ ಇದರಲ್ಲಿ ಹೆಚ್ಚಿನ ಭಾಗ ಮಳೆಯಿಂದ ಕೊಚ್ಚಿ ಸಮುದ್ರದ ಆಳದಲ್ಲಿ ಸೇರಿಹೋಗುತ್ತದೆ. ಮನುಷ್ಯ ಈ ಕ್ಷಾಮವನ್ನು ನಿವಾರಿಸಬೇಕಾದರೆ ಫಾಸ್ಫರಸನ್ನು ಹೆಚ್ಚಿನ ಅಂಶದಲ್ಲಿ ಚಕ್ರಗೆ ಒಂದಲ್ಲ ಒಂದು ದಿವಸ ಕೂಡಿಸಲೇಬೇಕು. 

	ಇತರ ಚಕ್ರಗಳು : ಇತರ ಎಲ್ಲ ಮೂಲ ಮತ್ತು ಸಂಯುಕ್ತ ವಸ್ತುಗಳೂ ನಷ್ಟವಾಗುವಿಕೆ, ಗಸಿಯುವಿಕೆ, ಪರ್ವತರಚನೆ, ಜ್ವಾಲಾಮುಖಿಯಾಗುವಿಕೆ ಈ ಕ್ರಿಯೆಗಳಲ್ಲಿ ಫಾಸ್ಫರಸನ್ನು ಹೋಲುತ್ತವೆ. 

	ಗಸಿಯುವ ಚಕ್ರಗಳು (ಸೆಡಿಮೆಂಟೇಷನ್ ಸೈಕಲ್ಸ್) : ಗಸಿಯುವಿಕೆಯ ಚಕ್ರಗಳಲ್ಲಿ ಸದಾ ಕೆಳಮುಖವಾಗಿ ಇಳಿಯುವ ಭಾವನೆಯೇ ಇರುತ್ತದೆ. ಅಂದರೆ ಕೆಲವು ಪೌಷ್ಟಿಕ ಲೋಹಾಂಶ ಪದಾರ್ಥಗಳು ಕರಗಿ ಮೈದಾನದ ಪ್ರದೇಶದಿಂದ ಸಾಗರದೆಡೆಗೆ ಸಾಗುತ್ತದೆ. ಇಂಥ ಪರಿಸ್ಥಿತಿ ಇದ್ದಾಗ ಪೌಷ್ಟಿಕಾಂಶಗಳ ಸಮತೋಲ ಪಡೆಯಲು ಸ್ಥಳೀಯ ಪುನರಾವರ್ತನೆಯ ಯಾಂತ್ರಿಕ ಸ್ಥಿತಿಗಳನ್ನು ಸುಧಾರಿಸಬೇಕು. ನಷ್ಟವಾದ ಪೌಷ್ಟಿಕಾಂಶಗಳು ಮತ್ತೆ ಭೂಗರ್ಭದೊಳಗೆ ಸೇರುವಂತೆ ಮಾಡಬೇಕು. ಆದರೆ ಪದಾರ್ಥಗಳ ನಷ್ಟಕ್ಕೆ ಮಾನವ ಕಾರಣನಾಗಿರುವುದರಿಂದ ಈ ಕ್ರಿಯೆ ತಡೆ ಹಿಡಿಯಲ್ಪಟ್ಟಿದೆ. ಉದಾಹರಣೆಗೆ ಹಿಂದೆ ಸಾಲ್‍ಮನ್ ಮೀನುಗಳು ಸಮುದ್ರದಿಂದ ಹೊರಕ್ಕೆ ಬಂದು ಸತ್ತಾಗ ಸಾಗರದಿಂದ ತಂದ ಪೌಷ್ಟಿಕ ಪದಾರ್ಥಗಳು ಮತ್ತೆ ಭೂಮಿಗೆ ಬಂದು ಸೇರುತ್ತಿದ್ದುವು. ಆದರೆ ಕೆಲವು ಪ್ರದೇಶಗಳಲ್ಲಿ ಸಾಲ್‍ಮನ್ ಮೀನುಗಳನ್ನು ಮಾನವ ಹಿಡಿಯುವುದರಿಂದ ಸಮುದ್ರದಿಂದ ಬರುತ್ತಿದ್ದ ಅಮೂಲ್ಯ ಪೌಷ್ಟಿಕ ಪದಾರ್ಥಗಳನ್ನು ತಡೆಹಿಡಿದಂತಾಗಿದೆ. ಇನ್ನೊಂದು ಉದಾಹರಣೆ ಕಾಡುಗಳಿಂದ ಮರಗಳನ್ನು ಅವ್ಯಾಹತವಾಗಿ ಮಾನವ ಕಡಿದು ತೆಗೆದು ಹಾಕುವುದರಿಂದ ಕೊಳೆತ ಮರದ ತುಂಡುಗಳಿಂದ ಮಣ್ಣಿಗೆ ಸೇರುತ್ತಿದ್ದ ಖನಿಜಾಂಶದ ಗೊಬ್ಬರವನ್ನು ತಡೆಹಿಡಿದಂತಾಗಿದೆ. 

	ಆಹಾರದ ಸರಪಳಿ: ಸಸ್ಯವರ್ಗಗಳಲ್ಲಿ ಇರುವ ಆಹಾರ ಶಕ್ತಿಯನ್ನು ಅನೇಕ ಜೀವಿಗಳು ಸೇವಿಸುತ್ತವೆ. ಈ ಜೀವಿಗಳೇ ಮತ್ತೆ ಕೆಲವು ಪ್ರಾಣಿಗಳ ಆಹಾರವಾಗುತ್ತವೆ. ಇಂಥ ಆಹಾರ ಶಕ್ತಿಯ ವರ್ಗಾವಣೆಗೆ ಆಹಾರದ ಸರಪಳಿ ಎಂದು ಹೆಸರು. ಆಹಾರ ಸರಪಳಿಗಳು ಪ್ರತ್ಯೇಕವಾದ ಅನುಕ್ರಮಗತಿ ಏನಲ್ಲ. ಆದರೆ ಪರಸ್ಪರ ಸಂಬಂಧ ಉಳ್ಳವುಗಳಾಗಿ ಒಂದಕ್ಕೊಂದು ಹಾಸುಹೊಕ್ಕಾಗಿವೆ. ಈ ಆಹಾರದ ವರ್ಗಾವಣೆ ವಿವಿಧವಾಗಿದ್ದರೂ ಪ್ರತಿಯೊಂದು ಸರಪಳಿಯಲ್ಲ್ಲೂ ಹೆಚ್ಚೆಂದರೆ ನಾಲ್ಕು ಅಥವಾ ಐದು ಕೊಂಡಿಗಳಿರುತ್ತವೆ. ಪ್ರತಿಯೊಂದು ವರ್ಗಾವಣೆಯಲ್ಲಿಯೂ ಶಕ್ತಿ ಅಥವಾ ಸತ್ತ್ವ ಕಡಿಮೆಯಾಗುತ್ತದೆ. ಆದ್ದರಿಂದ ಕೊಂಡಿಗಳು ಕಡಿಮೆ ಆದಷ್ಟೂ ಸತ್ತ್ವ ಅಧಿಕವಾಗಿರುತ್ತದೆ 

	ಪ್ರಕೃತಿಯಲ್ಲಿ ಮೂರು ವಿಧವಾದ ಆಹಾರದ ಸರಪಳಿಗಳನ್ನು ಕಾಣಬಹುದು. ಅವುಗಳಲ್ಲಿರುವ ಕೊಂಡಿಗಳು ಹೀಗಿವೆ
1. ಮಾಂಸಾಹಾರಿ ಕೊಂಡಿ: ಸಸ್ಯಗಳಿಂದ ಸಣ್ಣ ಪ್ರಾಣಿ --> ಸಣ್ಣಪ್ರಾಣಿಗಳಿಂದ ದೊಡ್ಡ ಪ್ರಾಣಿಗಳು
2. ಪರಾವಲಂಬಿ ಕೊಂಡಿ: ದೊಡ್ಡಪ್ರಾಣಿಗಳಿಂದ --> ಸಣ್ಣಜೀವಿಗಳು
3. ಸತ್ವಾವಲಂಬಿ ಕೊಂಡಿ: ಸತ್ತ ಅಥವಾ ಕೊಳೆತ ಪದಾರ್ಥಗಳಿಂದ --> ಸೂಕ್ಷ್ಮಜೀವಿಗಳು.

	ಆಹಾರದ ಸರಪಳಿಯಲ್ಲಿ ಪ್ರತಿಯೊಂದು ಜೀವಿ ಪ್ರಭೇದವೂ ಒಂದು ನಿರ್ದಿಷ್ಟ ಸ್ಥಾನದಲ್ಲಿರುತ್ತದೆ. ಈ ಸ್ಥಾನವೇ ಪೋಷಕ ಮಟ್ಟ (ಟ್ರೋಮಿಕ್‍ಲೆವೆಲ್). ಆಹಾರ ಸರಪಳಿಯಲ್ಲಿ ಮಿಡತೆ, ಕಪ್ಪೆ, ಹಾವು, ಗೂಬೆಗಳಿದ್ದರೆ, ಗೂಬೆ ಹೆಚ್ಚಿನ ಪೋಷಕಮಟ್ಟದಲ್ಲಿರುತ್ತದೆ. ಹಾವು ಅದಕ್ಕಿಂತ ಸ್ವಲ್ಪ ಕಡಿಮೆ. ಒಂದು ಆಹಾರದ ಸರಪಳಿಯಲ್ಲಿ ಎಷ್ಟು ಪ್ರಭೇದಗಳಿರುತ್ತವೆಯೋ ಅಷ್ಟು ಪೋಷಕಮಟ್ಟಗಳಿರುತ್ತವೆ. ಮೊದಲನೆಯ ಮಟ್ಟದಲ್ಲಿ ಹಸುರು ಸಸ್ಯಗಳೂ, ಎರಡನೆಯದರಲ್ಲಿ ಸಸ್ಯಾಹಾರಿಗಳೂ, ಮೂರನೆಯದರಲ್ಲಿ ಸಸ್ಯಾಹಾರಿಗಳನ್ನು ತಿನ್ನುವ ಮಾಂಸಾಹಾರಿಗಳೂ ಇವೆ. ಆಹಾರದ ಸರಪಳಿಯಲ್ಲಿ ಒಂದು ಮಟ್ಟದಿಂದ ಮುಂದಿನ ಮಟ್ಟಕ್ಕೆ ಪ್ರವಹಿಸುವ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಯಾವುದೇ ಆಹಾರ ಸರಪಳಿಯಲ್ಲಿ ಉತ್ಪಾದಕ ಜೀವಿಗಳ ಸಂಖ್ಯೆ ಗರಿಷ್ಠವಾಗಿದ್ದು, ಬಳಕೆದಾರ ಜೀವಿಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತದೆ. ಉದಾಹರಣೆಗೆ ಆಲ್ಗೆ, ಶ್ರಿಂಪ್, ಮೀನುಗಳು, ಸೀಲ್‍ಗಳು, ಕಿಲ್ಲರ್ ತಿಮಿಂಗಿಲಗಳ ಆಹಾರ ಸರಪಳಿಯನ್ನು ಗಮನಿಸಿದರೆ ಆಲ್ಗೆಗಳು ಗರಿಷ್ಠ ಪ್ರಮಾಣದಲ್ಲಿದ್ದು, ಕಿಲ್ಲರ್ ತಿಮಿಂಗಿಲಗಳು ಕನಿಷ್ಠ ಪ್ರಮಾಣದಲ್ಲಿರುತ್ತದೆ. ಇದನ್ನು ಚಿತ್ರದ ಮೂಲಕ ನಿರೂಪಿಸಿದಾಗ ಆಹಾರದ ಪಿರಮಿಡ್ ದೊರೆಯುತ್ತದೆ.

ಈ ಪಿರಮಿಡ್ಡಿನ ಬುನಾದಿ ಅಗಲವಾದಷ್ಟೂ ಪಿರಮಿಡ್ಡು ಭದ್ರವಾಗುತ್ತದೆ. ಅಂದರೆ ಉಳಿದ ಜೀವಿಗಳಿಗೆ ಆಹಾರವೊದಗಿಸುವ ಸಸ್ಯಗಳ ಸಂಖ್ಯೆ ಹೆಚ್ಚಿದಷ್ಟು ಪ್ರಕೃತಿ ವ್ಯವಸ್ಥೆ ಹೆಚ್ಚು ಭದ್ರವಾಗುತ್ತದೆ.

	ಒಂದು ಜನಾಂಗದ ಬೆಳೆವಣಿಗೆ ಆ ಜನಾಂಗಕ್ಕೆ ದೊರೆಯುವ ಆಹಾರವನ್ನು ಬಲುಮಟ್ಟಿಗೆ ಅವಲಂಬಿಸಿದೆ. ಪ್ರತಿಯೊಂದು ಸಮಾಜದ¯್ಲೂ ಮಿಶ್ರ ಆಹಾರದ ಒಂದು ಜಾಲ (ವೆಬ್) ಇರುತ್ತದೆ. ಈ ಜಾಲ ಎಲ್ಲ ಜೀವರಾಶಿಗಳನ್ನೂ ಒಳಗೊಂಡಿದೆ. ಇದರ ಮಹತ್ವವನ್ನು ಮುಂದೆ ವಿವರಿಸುವ ಉದಾಹರಣೆಯಿಂದ ಕಾಣಬಹುದು. ಆಹಾರಜಾಲದತ್ತ ನಮ್ಮ ಗಮನವನ್ನು ಮೊದಲು ಸೆಳೆದವ ಸುಪ್ರಸಿದ್ಧ ವಿಜ್ಞಾನಿ ಚಾಲ್ರ್ಸ್ ಡಾರ್ವಿನ್. ಅವನು ಈ ವ್ಯವಸ್ಥೆಯನ್ನು ಜೀವದ ಜಾಲ, ಬದುಕಿನ ಜಾಲ ಎಂದು ಬಣ್ಣಿಸಿದ. ಇದರ ವಿವರಣೆಯ ಚಿತ್ರವನ್ನು ನಮ್ಮ ಮುಂದಿಟ್ಟಿದ್ದಾನೆ. ವಿಚಿತ್ರ ಸನ್ನಿವೇಶದಲ್ಲಿ ಇಂಗ್ಲೆಂಡಿನ ಆರ್ಥಿಕ ಜೀವನ ಒಬ್ಬೊಂಟಿಗರಾದ ಮುದುಕಿಯರ ಜೀವನದೊಡನೆ ಹೇಗೆ ಹೊಂದಿಕೊಂಡಿದೆ ಎಂದು ತೋರಿಸಿಕೊಟ್ಟ. ಅವನ ವಾದ ಈ ರೀತಿ ಇದೆ. ಒಬ್ಬೊಂಟಿಗ ಮುದುಕಿಯರು ಬೆಕ್ಕುಗಳನ್ನು ಸಾಕುತ್ತಾರೆ. ಬೆಕ್ಕುಗಳು ಬೀದಿ ಇಲಿಗಳನ್ನು ತಿನ್ನುತ್ತವೆ. ಬೀದಿ ಇಲಿಗಳು ಜೀರಂಬಿಗಳನ್ನು ತಿನ್ನುತ್ತವೆ. ಈ ಜೀರಂಬಿಗಳು ಸಸ್ಯಜಾತಿಯ ಗರ್ಭದಾರಣೆಗೆ ಸಹಾಯಕಗಳು. ಆದ್ದರಿಂದ ಮುದುಕಿಯರ ಸಂಖ್ಯೆ ಹೆಚ್ಚಾಗಿದ್ದರೆ ಬೆಕ್ಕುಗಳು ಜಾಸ್ತಿ; ಬೀದಿ ಇಲಿಗಳು ಕಡಿಮೆ; ಆದ್ದರಿಂದ ಜೀರಂಬಿಗಳು ಅಧಿಕ; ಸಸ್ಯಜಾತಿ ಬೆಳೆವಣಿಗೆ ಹೇರಳ. ಈ ವಾದ ಮೇಲ್ನೋಟಕ್ಕೆ ವಿಚಿತ್ರವಾಗಿ ಕಂಡರೂ ಒಬ್ಬೊಂಟಿಗ ಮುದುಕಿಯರಿಗೂ ಒಂದು ಜಾತಿಯ ಸಸ್ಯವರ್ಗಕ್ಕೂ ಇರುವ ಆಂತರಿಕ ಸಂಬಂಧ ಇದರಿಂದ ವ್ಯಕ್ತವಾಗುತ್ತದೆ, ಅಂದರೆ ಯಾವುದಾದರೂ ಜೀವಿಜಾತಿಯನ್ನೂ ಅಳಿಸಿಹಾಕಿದರೆ ಅದರ ಪರಿಣಾಮ ಇತರ ಜೀವರಾಶಿಗಳ ಮೇಲೆ ಉಂಟಾಗುತ್ತದೆ ಎಂಬುದು ನಿಸ್ಸಂದೇಹ. ಇದರ ಸತ್ಯಾಂಶ ಪರಿಸರವನ್ನು ಮಾನವ ಪರಿವರ್ತಿಸತೊಡಗಿದಾಗಲೆಲ್ಲ ತಿಳಿವಳಿಕೆಗೆ ಬರುತ್ತಲೇ ಇರುವುದು. 

ಚಿತ್ರ-7

	ಪರಿಸರದ ಭೌತ ಮತ್ತು ಜೈವಿಕ ಅಂಶಗಳು : ಪ್ರಾಣಿಯ ಬದುಕು ಅದು ವಾಸಮಾಡುವ ವಾತಾವರಣದ ಭೌತ ಮತ್ತು ಜೈವಿಕ ಘಟಕಗಳ ವಿವಿಧ ಪರಿಣಾಮಗಳಿಗೆ ಒಳಗಾಗುತ್ತದೆ. ಉಷ್ಣ, ಗಾಳಿ, ನೀರಿನ ಗುಣ ಮತ್ತು ಪ್ರಮಾಣ, ನೀರಿನ ಪ್ರವಾಹದ ಶಕ್ತಿ, ಬೆಳಕು, ನೀರಿನಲ್ಲಿರುವ ಉಪ್ಪಿನ ಪ್ರಮಾಣ ಇತ್ಯಾದಿಗಳು ಭೌತ ಅಂಶಗಳು. ಜನಸಾಂದ್ರತೆ ಮತ್ತು ಒತ್ತಡ, ಆಹಾರ ಸರಬರಾಜು, ಇತರ ಜೀವರಾಶಿಗಳೊಡನೆ ಇರುವ ಸಂಬಂಧ ಇವೇ ಮುಂತಾದುವು ಜೈವಿಕ ಅಂಶಗಳು. 

	ಉಷ್ಣ: ಪ್ರತಿ ಜೀವಿಯೂ ತಾನು ವಾಸಮಾಡುವ ಪರಿಸರದ ಉಷ್ಣದಿಂದ ಪ್ರಭಾವಿತವಾಗಿರುತ್ತದೆ. ಶೀತರಕ್ತಪ್ರಾಣಿಗಳು (ಪೋಯ್‍ಕಿಲೊಥರ್ಮನ್ಸ್) ಬಿಸಿರಕ್ತ ಪ್ರಾಣಿಗಳಿಗಿಂತ (ಹೋಮಿಯೊಥರ್ಮನ್ಸ್) ಹೆಚ್ಚು ಪ್ರಭಾವಿತವಾಗಿರುತ್ತವೆ. ಶೀತರಕ್ತ ಪ್ರಾಣಿಗಳಲ್ಲಿ ಮರಿಗಳ ಬೆಳೆವಣಿಗೆ ಮತ್ತು ಅಭಿವೃದ್ಧಿ ಬಾಹ್ಯ ಉಷ್ಣವನ್ನು ಅವಲಂಬಿಸಿದೆ. ಹೀಗಾಗಿ ಚಳಿಗಾಲ ಮತ್ತು ಬೇಸಗೆ ಕಾಲಗಳಲ್ಲಿ ಅವು ಬದುಕುವ ಬೇರೆ ದಾರಿಯನ್ನು ಕಂಡುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಕೆಲವು ಪ್ರಾಣಿಗಳು ಚಳಿಗಾಲದಲ್ಲಿ ನಿಶ್ಚೇಷ್ಟಿತ ಅವಸ್ಥೆಯನ್ನು ಪಡೆಯುತ್ತವೆ. ಮತ್ತೆ ಕೆಲವು ಪ್ರಾಣಿಗಳು ಬೇಸಗೆಯಲ್ಲಿ ಅಭಾವ ಪರಿಸ್ಥಿತಿಯಿಂದ ನಿಶ್ಚೇಷ್ಟಿತವಾಗುತ್ತವೆ. ಭೂಮಿಯ ಉತ್ತರ ಭಾಗದಲ್ಲಿ ಅಸಮಉಷ್ಣದ ಪ್ರಾಣಿಗಳ ಸಂಖ್ಯೆ ಕಡಿಮೆ. ಇವು ಉತ್ತರದಲ್ಲಿನ ಶೀತವಾತಾವರಣವನ್ನು ತಡೆಯುವ ಶಕ್ತಿ ಹೊಂದಿಲ್ಲದಿರುವುದೇ ಕಾರಣ. ಆದರೂ ಕೆಲವು ಸಮಉಷ್ಣದ ಪ್ರಾಣಿಗಳೂ ಚಳಿಗಾಲದಲ್ಲಿ ನಿಶ್ಚೇಷ್ಟಿತಾವಸ್ಥೆಯನ್ನು ಹೊಂದುವುದನ್ನು ಕಾಣುತ್ತೇವೆ. ಉಷ್ಣದ ಪ್ರಭಾವದಿಂದ ಪ್ರಾಣಿಗಳ ರಚನೆಯಲ್ಲಿಯೂ ವ್ಯತ್ಯಾಸವನ್ನು ಕಾಣುತ್ತೇವೆ. ಉದಾಹರಣೆಗೆ ಶೀತವಲಯದ ಸಮಉಷ್ಣದ ಪ್ರಾಣಿಗಳು ಉಷ್ಣವಲಯದ ಅಂಥವೇ ಪ್ರಾಣಿಗಳಿಗಿಂತ ದೊಡ್ಡವು. ಉಷ್ಣವಲಯದ ಪ್ರಾಣಿಗಳಿಗೆ ಉದ್ದನೆಯ ತುದಿಗಳಿವೆ. ಅರಿಜೋನ ದೇಶದ ಜಾಕ್ ಮೊಲಗಳ ಕಿವಿಗಳು ಆರ್ಕ್‍ಟಿಕ್ ಪ್ರದೇಶದ ಅದೇ ಜಾತಿಯ ಮೊಲಗಳ ಕಿವಿಗಳಿಗಿಂತ ಉದ್ದ. ಇದೇ ರೀತಿ ತೀವ್ರ ಉಷ್ಣ ವಾತಾವರಣದಲ್ಲಿ ಬೆಳೆಸಿದ ಇಲಿಗಳಿಗೆ ಉದ್ದ ಬಾಲಗಳು ಬೆಳೆಯುತ್ತವೆಂದು ಪ್ರಯೋಗಗಳಿಂದ ಗೊತ್ತಾಗಿದೆ. 

	ಗಾಳಿ : ತೋರಿಕೆಗೆ ಇದರ ಪ್ರಭಾವ ಪ್ರಾಣಿಗಳಿಗಿಂತ ಸಸ್ಯಗಳ ಮೇಲೆ ಹೆಚ್ಚು ಪರಿಣಾಮಕಾರಿ ಎಂದು ಕಂಡರೂ ಪ್ರಾಣಿಗಳ ಮೇಲೆಯೂ ಗಾಳಿಯ ಪ್ರಭಾವ ಸಾಕಷ್ಟು ಇದ್ದೇ ಇದೆ. ರೆಕ್ಕೆಕೀಟಗಳು ತಮ್ಮ ಹರಡಿಕೆಗೆ ಸಾಮಾನ್ಯವಾಗಿ ಗಾಳಿಯನ್ನೇ ಅವಲಂಬಿಸಿವೆ. ಹಾರುಜೇಡಗಳು ಗಾಳಿಯ ಸಹಾಯದಿಂದ ಬಲು ಎತ್ತರಕ್ಕೆ ದೂರಕ್ಕೆ ಹಾರಬಲ್ಲವು. ಗಾಳಿ ಅತಿಯಾಗಿರುವ ಪ್ರದೇಶದಲ್ಲಿ ಕೆಲವು ಚಿಟ್ಟೆಗಳು ಹಾರುವ ಶಕ್ತಿಯನ್ನೇ ಕಳೆದುಕೊಂಡಿರುತ್ತವೆ. ಪರ್ವತಪ್ರದೇಶದಲ್ಲಿ ಪಕ್ಷಿಗಳು ಗೂಡುಗಳನ್ನು ಕಟ್ಟಿಕೊಳ್ಳಲು ಬಂಡೆಗಳನ್ನೇ ಆಶ್ರಯಿಸುತ್ತವೆ. ಟಿಬೆಟ್ ಮರುಭೂಮಿಯ ಎತ್ತರ ಪ್ರದೇಶಗಳಲ್ಲಿ ವಾಸಮಾಡುವ ಹಕ್ಕಿಗಳು ಗೂಡುಗಳಿಗೆ ರಕ್ಷಣೆಗಾಗಿ ಕಲ್ಲಿನ ಕೋಟೆ ಕಟ್ಟುತ್ತವೆ. 1940ನೆಯ ಜುಲೈ ತಿಂಗಳಲ್ಲಿ ಅಯೋವ ಪ್ರಾಂತ್ಯದಲ್ಲಿ ಬೀಸಿದ ಚಂಡಮಾರುತದಿಂದ ನೂರು ಎಕರೆ ಪ್ರದೇಶದಲ್ಲಿ ಒಂದು ಸಾವಿರ ಹಕ್ಕಿಗಳು ಒಮ್ಮೆಲೇ ನಾಶವಾದುವು. ಅಂಥ ಅನಿರೀಕ್ಷಿತ ಚಂಡಮಾರುತಗಳಿಂದ ಭಾರಿಪ್ರಮಾಣದ ಅನಾಹುತ ಸಂಭವಿಸುತ್ತದೆ. 

	ನೀರಿನ ಪ್ರವಾಹ : ಜಲಜೀವಿಗಳು ಪ್ರವಾಹಗಳನ್ನು ಎದುರಿಸಲು ತಮ್ಮ ಬೆಳೆವಣಿಗೆಯ ರೂಪನ್ನೇ ಬದಲಾಯಿಸಿಕೊಂಡಿರುತ್ತವೆ. ತೊಟ್ಟಿಲ್ಲದ ಜೀವರೂಪಗಳು ಇದಕ್ಕೆ ಉದಾಹರಣೆ.

	ಬೆಳಕು : ಪ್ರಾಣಿಗಳ ಕ್ರಿಯೆಗಳ ಮೇಲೆ ಬೆಳಕಿನ ಪ್ರಭಾವ ಇದೆ. ಇದರಿಂದ ಉದ್ಭವಿಸುವ ಹೆಚ್ಚಿನ ತೊಡಕಿನ ಪರಿಣಾಮಗಳನ್ನು ಅವು ಎದುರಿಸಬೇಕು. ವಲಸೆ ಹೋಗುವ ಹಕ್ಕಿಗಳು ಉತ್ತರದ ಕಡೆ ಪ್ರವಾಸ ಹೋಗುವಾಗ ಹೆಚ್ಚು ಹಗಲಿರುವ ದಿವಸಗಳನ್ನೇ ಅವಲಂಬಿಸಿರುತ್ತವೆ. ಅಲ್ಪಾವಧಿಯ ಹಗಲಿರುವ ಕಾಲದಲ್ಲಿ ದಕ್ಷಿಣದ ಕಡೆ ವಲಸೆಬರುವ ಉತ್ರರದ ಪಕ್ಷಿಗಳ ತುಪ್ಪಟದ ಬಣ್ಣ ಬದಲಾವಣೆಯಾಗುವುದು ಹಗಲಿನ ಅವಧಿಯ ಪರಿವರ್ತನೆಯ ಪರಿಣಾಮ. ಕೆಲವು ಪ್ರಾಣಿಗಳು ಹಗಲಿನಲ್ಲಿ ಹೊರಗೆ ಬರುವುದೇ ಇಲ್ಲ. ರಾತ್ರಿ ವೇಳೆಯಲ್ಲಿಯೇ ಆಹಾರ ಹುಡುಕಿಕೊಂಡು ಬರುತ್ತವೆ. ಮತ್ತೆ ಕೆಲವು ಸಣ್ಣ ಜೀವಿಗಳು ಬೆಳಕನ್ನು ಬೇಕೆಂದೇ ದೂರೀಕರಿಸುತ್ತವೆ. ಎಲೆಗಳ ಮರೆಯಲ್ಲಿ ವಾಸಮಡುವ, ಕೊಳೆತ ಮರಗಲ ತುಂಡಿನ ಸಂದಿಗಳಲ್ಲಿ ಬದುಕುವ ಬೆಂಕಿಮೊಸಳೆ, ಅನೇಕ ಕೀಟಗಳು ಮತ್ತು ಇತರ ಸಂದಿಪದಿಗಳು ಇದಕ್ಕೆ ಉದಾಹರಣೆಗಳು. ಇದರಿಂದ ಬೆಳಕು, ಪ್ರಾಣಿಗಳ ವಾಸಸ್ಥಾನ ಮತ್ತು ರೀತಿಗಳ ಮೇ¯ೂ ಪರಿಣಾಮ ಬೀರುತ್ತವೆ ಎಂಬುದು ಖಚಿತ. ಬೆಳಕು ಬಲು ದೂರದಿಂದ ಕೀಟಗಳನ್ನು ತನ್ನ ಕಡೆಗೆ ಆಕರ್ಷಿಸುತ್ತವೆ. ಈ ಕಾರಣದಿಂದ ರಾತ್ರಿವೇಳೆ ಹಾರಾಡುವ ಅನೇಕ ರೀತಿಯ ಹುಳುಗಳನ್ನು ಹತೋಟಿಗೆ ತರಬಹುದು ಮತ್ತು ಹಿಡಿಯಲೂಬಹುದು. 

	ನೀರು : ನೀರಿಲ್ಲದೆ ಯಾವ ಪ್ರಾಣಿಯೂ ಬದುಕಲಾರದು. ನೀರಿನ ಸರಬರಾಜು ಜಲಾವೃತ ಪ್ರದೇಶಗಳಿಂದ ಹಿಡಿದು ಮರುಭೂಮಿಯವರೆಗಿನ ಅನೇಕ ಸ್ಥಳಗಳಲ್ಲಿ ವಿವಿಧ ರೀತಿಯಲ್ಲಿ ಇದೆ. ಒಣಪ್ರದೇಶಗಳಲ್ಲೂ ಜೀವಿಗಳು ವಾಸಿಸಬಲ್ಲವು. ಅದಕ್ಕಾಗಿ ಕೆಲವು ವಿಶೇಷ ಮಾರ್ಪಾಟುಗಳನ್ನು ಹೊಂದಿರುತ್ತವೆ. ದಪ್ಪ ಚರ್ಮ, ದೇಹಕ್ರಿಯೆಯಿಂದ ಉತ್ಪತ್ತಿಯಾದ ನೀರನ್ನೇ ಉಪಯೋಗಿಸುವುದು, ಒಣಮೂತ್ರವಿಸರ್ಜನೆ ಇವೇ ಮೊದಲಾದ ಮಾರ್ಪಾಟುಗಳಲ್ಲದೆ ಕೆಲವು ಪ್ರಾಣಿಗಳು ವಿಶಿಷ್ಟ ಅಭ್ಯಾಸಗಳನ್ನೂ ಹೊಂದಿವೆ. ಉದಾಹರಣೆಗೆ, ಬಿಲತೋಡುವ ಮತ್ತು ರಾತ್ರಿ ಚಲಿಸುವ ಅಭ್ಯಾಸಗಳು, ಪುಪ್ಪುಸಮೀನು ವಾಸಿಸುವ ಕೆಸರು ಹಿಂಗುವಾಗ ಮೀನು ನಿಶ್ಚೇಷ್ಟಿತವಾಗುವ ಸ್ವಭಾವ ಇತ್ಯಾದಿ. 

	ವಿವಿಧ ರೀತಿ ಕ್ಷಾರಗಳು : ಕ್ಯಾಲ್ಸಿಯಂ, ಮ್ಯಾಗ್ನೀಸಿಯಂ, ಫಾಸ್ಪರಸ್ ಮಿಶ್ರಕ್ಷಾರ ಇವು ನೀರಿನಲ್ಲಿರುವ ಮುಖ್ಯ ಅಂಶಗಳು. ಆದ್ದರಿಂದ ಹೊಸನೀರಿನಲ್ಲಿ ಮತ್ತು ಮಣ್ಣಿನಲ್ಲಿ ಇರುವ ಕ್ಷಾರಗಳ ಪ್ರಮಾಣ ಅಲ್ಲಿ ವಾಸಿಸುವ ಪ್ರಾಣಿಗಳನ್ನು ಮಿತಿಗೊಳಿಸುವ ಮುಖ್ಯ ಅಂಶ. ಮೃದ್ವಂಗಿಗಳೂ ವಲ್ಕವಂತಪ್ರಾಣಿಗಳೂ ಕ್ಯಾಲ್ಸಿಯಂ ಅಂಶವಿಲ್ಲದ ನೀರಿನಲ್ಲಿ ವಾಸಿಸಲಾರವು. ಮೃದುಜಲದಲ್ಲಿ ಸಿಹಿನೀರಿನ ಸ್ಪಂಜುಗಳು ಹೆಚ್ಚಾಗಿವೆ. ಕಾರಣ ಅಲ್ಲಿ ಜೈವಿಕ ಪದಾರ್ಥಗಳ ಸರಬರಾಜು ಚೆನ್ನಾಗಿರುತ್ತದೆ. ಕೆಲವು ಭೂಚರ ಪ್ರಾಣಿಗಳು ಮಣ್ಣಿನಲ್ಲಿರುವ ಕೆಲವು ಕ್ಷಾರಗಳ ಅಂಶಗಳ ಅಭಾವದಿಂದ ಶಕ್ತಿಹೀನವಾಗುತ್ತವೆ. 
 
	ಜೈವಿಕ ಅಂಶಗಳು (ಬಯೊಟಿಕ್ ಫ್ಯಾಕ್ಟರ್ಸ್) : ಎಲ್ಲ ಪ್ರಾಣಿಗಳೂ ಭೌತಬಲಗಳಿಂದ ಪ್ರಭಾವಿತವಾಗುತ್ತವೆ. ಇದರ ಜೊತೆಗೆ ಬಯೊಟೆಕ್ ಅಥವಾ ಜೈವಿಕ ಅಂಶಗಳೂ ತಮ್ಮ ಪ್ರಭಾವವನ್ನು ಬೀರುವುವು. ಆಹಾರಕ್ಕಾಗಿ ಇತರ ಪ್ರಾಣಿಗಳೊಡನೆ ಸ್ಪರ್ಧೆ, ವಾಸಕ್ಕಾಗಿ ಜಾಗಗಳ ಆಯ್ಕೆ, ಜೀವನಕ್ಕಾಗಿ ಜೊತೆಗಾರ್ತಿಯರ ಅನ್ವೇಷಣೆ ಇವೆಲ್ಲ ಜೈವಿಕ ಅಂಶಗಳು. ಭೌತ ಪರಿಸರ ಮತ್ತು ಜೈವಿಕ ಒತ್ತಡಗಳಿಂದ ರೂಪಿಸಲ್ಪಟ್ಟ ಕಾರ್ಯಗಳು ಸಹಕ್ರಿಯೆ (ಕೋಆಕ್ಷನ್) ಮತ್ತು ಪ್ರತಿಕ್ರಿಯೆಗಳ (ರಿಯಾಕ್ಷನ್) ಸ್ವರೂಪವನ್ನು ತಾಳುತ್ತವೆ. 

	ಜೀವಾವರಣ : ಪ್ರಾಣಿಗಳು ಮತ್ತು ಸಸ್ಯಗಳು ಒಟ್ಟೊಟ್ಟಾಗಿ ಮತ್ತು ಗುಂಪು ಗುಂಪಾಗಿ ಬಾಳುತ್ತವೆ. ಇದನ್ನೇ ಸಮುದಾಯ ಜೀವನ ಎನ್ನುತ್ತೇವೆ. ಪ್ರತಿಯೊಂದು ಸಮುದಾಯವೂ ಪರಿಸರದ ಸಹಕ್ರಿಯೆ ಮತ್ತು ಪ್ರತಿಕ್ರಿಯೆಗಳ ಸ್ವಭಾವದಿಂದ ಕೆಲವು ವಿಶೇಷ ಗುಣಗಳನ್ನು ಹೊಂದಿದೆ. ಸಮುದ್ರದಲ್ಲಿರುವ ಬಂಡೆಗಳ ಮೇಲೆ ಬೆಳೆಯುವ ಪ್ರಾಣಿಗಳ ಜೋಡಣೆ ಒತ್ತೊತ್ತಾಗಿದ್ದರೆ ಅರಣ್ಯಗಳಲ್ಲಿ ಹುಲ್ಲುಗಾವಲುಗಳಲ್ಲಿರುವ ವಿವಿಧ ಪ್ರಾಣಿಸಮುದಾಯಗಳು ಹೇರಳವಾಗಿ ಹರಡಿರುತ್ತವೆ. ಇಂಥ ಅಧಿಕ ಜೀವಿಗಳ ಸಮುದಾಯವನ್ನು ಬಯೋಮ್‍ಗಳೆಂದು ಕರೆಯುತ್ತೇವೆ. ಸಾಧಾರಣವಾಗಿ ಈ ಬಯೋಮ್‍ಗಳನ್ನು ಎಲ್ಲರೂ ಸುಲಭವಾಗಿ ಗುರುತಿಸಬಲ್ಲರು. ಕೆಲವು ಬಯೋಮ್‍ಗಳಿಗೆ ರೂಢಿನಾಮಗಳೊ ಇವೆ. ವಿಶ್ವದ ಬಯೋಮ್‍ಗಳಲ್ಲಿ ಉತ್ತರದ ಜೌಗುಪ್ರದೇಶ, ಪರ್ವತದ ಜೌಗುಪ್ರದೇಶ, ಹುಲ್ಲುಗಾವಲು, ಮರುಭೂಮಿ, ಕೋನಿಫರಸ್ ವೃಕ್ಷಗಳ ಅರಣ್ಯ, ಸಮಶೀತೋಷ್ಣವಲಯದ ಅರಣ್ಯ, ಉಷ್ಣವಲಯದ ಅರಣ್ಯ ಮತ್ತು ಚಾಪರಾಲ್ ಇವೇ ಮೊದಲಾದುವು ಪರಚಿತವಾದುವುಗಳು. 

ಚಿತ್ರ-8

	ಉತ್ತರದ ಚೌಗುಪ್ರದೇಶ (ಉತ್ತರದ ತಂಡ್ರ) : ಬಯೋಮ್‍ಗಳ ಅತ್ಯಂತ ವಿಸ್ತಾರವಾದ ಪ್ರದೇಶ. ಉತ್ತರಮೇರುವಿನ ಮಂಜು ಟೋಪಿಯಿಂದ ಕೋನಿಫರಸ್ ಅರಣ್ಯಗಳವರೆಗೆ ಇದು ವಿಸ್ತರಿಸಿದೆ. ಇಳಿಜಾರು ಬಯಲಿನಲ್ಲಿ ನೀರಸ ಪ್ರದೇಶದಲ್ಲಿರುವ ಕಣ್ಣುತಣಿಸುವ ಸುಪುಷ್ಟ ಸಸ್ಯಗಳು ಎತ್ತರದ ಗುಡ್ಡಗಳಲ್ಲಿ ಕಾಣಿಸುವುದಿಲ್ಲ. ನೀರಿನಿಂದ ತುಂಬಿರುವ ಹಳ್ಳಗಳು ಗೆಡ್ಡೆಕಟ್ಟಿರುವ ಗಟ್ಟಿನೆಲಕ್ಕಿಂತ ತಗ್ಗಿನಲ್ಲಿವೆ. ಸ್ಟೇಗ್ನಮ್ ಮತ್ತು ಲೈಕನ್ ಪಾಚಿಗಳೇ ಅಲ್ಲಿಯ ವಿಶೇಷ ಸಸ್ಯಗಳು. ಉಳಿದ ಒಣ ಪ್ರದೇಶಗಳಲ್ಲಿ ಕುರುಚಲು ಮತ್ತು ಸಣ್ಣ ಸಣ್ಣ ಬಳ್ಳಿಗಳು ವಿಶೇಷವಾಗಿವೆ. ಅಲ್ಪಾವಧಿಯ ಬೇಸಗೆಯಲ್ಲಿ ಈ ಪ್ರದೇಶಗಳೆಲ್ಲ ಹೂಗಳಿಂದ ಮತ್ತು ನೆಲದ ಮೇಲೆ ಕೂರುವ ಪಕ್ಷಿಗಳಿಂದ ತುಂಬಿರುತ್ತವೆ. ಸೊಳ್ಳೆ ಮತ್ತು ಕಚ್ಚುವ ನೊಣಗಳು ಅಸಂಖ್ಯಾತವಾಗಿದ್ದು ಚೌಗುನೆಲದಿಂದ ಪ್ರಾಣಿಗಳ ಮೇಲೆ ದಾಳಿ ನಡೆಸುತ್ತವೆ. ಇಲ್ಲಿ ವಾಸಮಾಡುವ ಪ್ರಾಣಿಗಳಲ್ಲಿ ಮಸ್ಕ್, ಕಿರಿಬೋ ಸಾರಂಗ, ತೋಳ, ನರಿ ಮುಖ್ಯವಾದುವು. ಮೂಷಕಪ್ರಾಣಿಗಳಲ್ಲಿ ಲೆಮ್ಮಿಂಗ್ ಮತ್ತು ಸಣ್ಣ ಸಣ್ಣ ಮೊಲಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿವೆ. ಶೀತಕಾಲದ ಚಳಿ, ಮಳೆ, ಆಹಾರದ ಅಭಾವ ಇಲ್ಲಿನ ಪ್ರಾಣಿಗಳು ಎದುರಿಸಬೇಕಾದ ಸಮಸ್ಯೆಗಳು. ಆದ್ದರಿಂದ ಅನೇಕ ಪ್ರಾಣಿಗಳು ಅನುಕೂಲ ವಾತಾವರಣವಿರುವ ಪ್ರದೇಶಕ್ಕೆ ವಲಸೆ ಹೋಗುತ್ತವೆ. ಸ್ಥಿರವಾದ ಮಂಜಿನಲ್ಲಿ ನಿಷ್ಕ್ರಿಯತ್ವ ಅಸಾಧ್ಯವಾಗಿರುವುದರಿಂದ ಅನೇಕ ಮೂಷಕಗಳು ಹಿಮದಲ್ಲಿ ಬಿಲಕೊರೆದು ಒಣಸಸ್ಯಗಳನ್ನೇ ತಿಂದು ಬದುಕುತ್ತವೆ. 

	ಉತ್ತರದ ಕೋನಿಫರಸ್ ಕಾಡು: ಈ ವೃಕ್ಷಾರಣ್ಯ ಜೌಗುಪ್ರದೇಶದಂತೆಯೇ ವಿಸ್ತಾರವಾಗಿದೆ. ಕೋನಿಫರ್ ಮರಗಳು, ಪೊದೆಗಳು, ಬಳ್ಳಿಗಳು, ಎಲೆ ಉದುರುವ ಕೆಲವು ಜಾತಿಯ ಮರಗಳು ಇವೇ ಇಲ್ಲಿಯ ಸಸ್ಯವರ್ಗಗಳು. ಇಲ್ಲಿ ಆಹಾರ ಹೇರಳವಾಗಿ ದೊರಕುವುದರಿಂದ ಪ್ರಾಣಿಜೀವನ ಸಂಪದ್ಭರಿತವಾಗಿದೆ. ಮೂಸೆ ಸಾರಂಗ, ಜಿಂಕೆ, ಚಿಕ್ಕನರಿ ಮತ್ತು ತೋಳ ಇವು ಇಲ್ಲಿನ ಮುಖ್ಯ ಪ್ರಾಣಿಗಳು. ಇವುಗಳಲ್ಲಿ ಸಸ್ಯಾಹಾರಿಗಳೂ ಮಾಂಸಾಹಾರಿಗಳೂ ಇವೆ. ಮುಳ್ಳುಹಂದಿ ಮತ್ತು ಪೈನ್ ಇಲಿ, ಮೂಷಕ ಜಿಂಕೆ (ಡೀರ್ ಮೌಸ್) ಎತ್ತರ ಮರಗಳಲ್ಲಿ ಗೂಡುಗಟ್ಟಿ ವಾಸಮಾಡುವ ಅನೇಕ ಮಾದರಿಯ ಪಕ್ಷಿಗಳೂ ಇಲ್ಲಿ ವಾಸಿಸುತ್ತವೆ. ಆದರೆ ಶೀತಕಾಲ ಬಂದರೆ ಇವು ದಕ್ಷಿಣದೆಡೆಗೆ ವಲಸೆ ಹೋಗುತ್ತವೆ. ಆಹಾರಾಭಾವ ಇದರ ಮುಖ್ಯ ಕಾರಣ. 

	ಸಮಶೀತೋಷ್ಣವಲಯದ ಪರ್ಣಪಾತಿ ಅರಣ್ಯಗಳು (ಟೆಂಪರೇಟ್ ಡೆಸಿಡುಯಸ್ ಫಾರೆಸ್ಟ್ಸ್) : ಈ ಅರಣ್ಯಗಳ ಸ್ವಭಾವ ವೈವಿಧ್ಯಪೂರ್ಣವಾದದ್ದು. ಇಲ್ಲಿಯ ಎಲ್ಲ ಜೀವಿಗಳನ್ನೂ ಸಣ್ಣ ಸಣ್ಣ ಗುಂಪುಗಳಾಗಿ ವಿಂಗಡಿಸಿ ಸಂಘಗಳು ಎಂದು ಕರೆಯಬಹುದು. ಈ ಅರಣ್ಯಗಳ ರಚನೆ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿಯದಾಗಿರುವುದರಿಂದ ಅವುಗಳ ಘಟಕಗಳನ್ನು ಸುಲಭವಾಗಿ ಗುರುತಿಸಬಹುದು. ಉದಾಹರಣೆಗೆ ಸಂಯುಕ್ತ ಸಂಸ್ಥಾನಗಳ ಪೂರ್ವಭಾಗದಲ್ಲಿನ ಬೀಚ್ ಮೇಪಲ್ ಕಾಡು, ಓಕ್ ಹಿಕರಿ ಕಾಡು, ಓಕ್ ಚೆಸ್ಟ್‍ನಟ್ ಕಾಡು ಮುಂತಾದುವುಗಳು. ಶೀತಕಾಲದಲ್ಲಿ ಈ ಎಲ್ಲ ಮರಗಳ ಎಲೆಗಳು ಉದುರುವುದೇ ಇವುಗಳ ಸಾಮಾನ್ಯಲಕ್ಷಣ. ಗಿಡ್ಡಾಗಿ ಬೆಳೆಯುವ ಗಿಡಗಳೂ ಇಲ್ಲಿನ ಇನ್ನೊಂದು ಲಕ್ಷಣ. ಈ ಅರಣ್ಯಜಾತಿಯನ್ನು ಯೂರೋಪಿನ ಪಶ್ಚಿಮಭಾಗ, ರಷ್ಯ, ಚೀನ ಮತ್ತು ಜಪಾನ್ ದೇಶಗಳಲ್ಲೂ ಕಾಣುತ್ತೇವೆ. ವಿಶಿಷ್ಟ ಗುಣ, ಸ್ವಭಾವಹೊಂದಿರುವ ಅನೇಕ ವಲ್ಕವಂತ ಪ್ರಾಣಿಗಳು, ಹಾವುಗಳು ಮತ್ತು ಹುಳುಹುಪ್ಪಟೆಗಳು ಅಲ್ಲಿವೆ. ಚಳಿಗಾಲದಲ್ಲಿ ಕೊರೆತದಿಂದ ಅಹಾರಕ್ಕೆ ಬಹಳ ತೊಂದರೆ ಆಗುವುದರಿಂದ ಎಲೆಗಳ ಸುರುಳಿಯಲ್ಲಿರುವ ಅಕಶೇರುಕಗಳು ಜಡತ್ವವನ್ನು ಹೊಂದುತ್ತವೆ ; ಹಕ್ಕಿಗಳಾದರೋ ದಕ್ಷಿಣದ ಕಡೆ ವಲಸೆಹೋಗುತ್ತವೆ. 

	ಹುಲ್ಲುಗಾವಲು ಪ್ರದೇಶ : ಉತ್ತರ ಅಮೆರಿಕದ ಪಶ್ಚಿಮದ ಬಯಲು ಪ್ರದೇಶದಲ್ಲಿ ಕಾಣುವ ತಗ್ಗುದಿಣ್ಣೆಗಳಿಲ್ಲದ ಹುಲ್ಲುಗಾವಲುಗಳು ಅತ್ಯಂತ ಅದ್ಭುತವಾಗಿವೆ ಮತ್ತು ಅಷ್ಟೇ ನೀರಸವೂ ಆಗಿವೆ. ಏಷ್ಯಖಂಡದ ಸ್ಟೆಪೀಸ್ ಮತ್ತು ದಕ್ಷಿಣ ಅಮೆರಿಕದ ಪಂಪಾಸ್‍ಗಳೂ ಕೂಡ ಹುಲ್ಲುಗಾವಲುಗಳೇ. ssಸೂರ್ಯಕಾಂತಿ ಮತ್ತು ಆಸ್ಟರ್ ಜಾತಿಯ ಹೂವಿನ ಗಿಡ ಇಲ್ಲಿನ ಮಿಶ್ರ ಸಸ್ಯವರ್ಗ. ಉದ್ದವಾದ ನದಿಗಳ ಅಕ್ಕಪಕ್ಕಗಳಲ್ಲಿ ನೀರಿನ ಆಶ್ರಯವಿರುವಲ್ಲಿ ಬೆಳೆಯುವ ಕೆಲವು ಮರಗಳನ್ನು ಬಿಟ್ಟರೆ ಇತರ ಸಂಪದ್ಭರಿತ ಸಸ್ಯಗಳ ಬೆಳೆವಣಿಗೆ ಇಲ್ಲ. ಪಶ್ಚಿಮಭಾಗದ ಹುಲ್ಲುಗಾವಲುಗಳ ಪೂರ್ವಭಾಗದಲ್ಲಿ ಹುಲ್ಲು ಆಳೆತ್ತರ ಬೆಳೆಯಬಹುದು. ಪಶ್ಚಿಮದ ಕಡೆ ಸಸ್ಯ ಸಮೃದ್ಧಿ ಕಡಿಮೆ. ಈ ಬಯಲಿನಲ್ಲಿ ಕಾಣುವ ಪ್ರಾಣಿಗಳು ದೊಡ್ಡವೂ ಸಸ್ಯಾಹಾರಿಗಳೂ ಆಗಿವೆ. ಅವು ಮೆಲುಕು ಹಾಕುವ ಪ್ರಾಣಿಗಳು. ಇವುಗಳಲ್ಲಿ ಕಾಡೆಮ್ಮೆಗಳು ಒಮ್ಮೆ ಅಧಿಕ ಸಂಖ್ಯೆಯಲ್ಲಿದ್ದುವು. ಕೊಯೋಟ್ ಜಿಂಕೆ, ತೋಳ, ಮೊಲ, ಅನೇಕ ರೀತಿಯ ಮೂಷಕಗಳು, ನೆಲದಲ್ಲಿ ಗೂಡುಕಟ್ಟುವ ಹಕ್ಕಿಗಳು, ಬಯಲುಹಾವುಗಳು ಮತ್ತು ಕೆಲವು ವಿಶೇಷರೀತಿಯ ಕೀಟಗಳು ಈಗಲೂ ಇವೆ. ಇಲ್ಲಿ ಕಾಳುಗಳನ್ನು ಹೆಚ್ಚಾಗಿ ಬೆಳೆಯಬಹುದು. ಇದು ಪಶುಪಾಲನೆಗೆ ಅನುಕೂಲವಾದ ಸ್ಥಳ. ಆದ್ದರಿಂದ ಈ ಹುಲ್ಲುಗಾವಲುಗಳು ಆರ್ಥಿಕ ದೃಷ್ಟಿಯಿಂದ ಅತಿಮುಖ್ಯ. ಈ ಉಪಯುಕ್ತ ಪ್ರಾಂತ್ಯಗಳು ಮಾನವನ ಆಕ್ರಮಣಕ್ಕೆ ಒಳಗಾಗಿ ನೈಸರ್ಗಿಕ ಪ್ರದೇಶಗಳು ಕೆಲವೇ ಮಾತ್ರ ಉಳಿದಿವೆ. ಇಲ್ಲಿ ಪ್ರಾಣಿಗಳು ಯಶಸ್ವಿ ಜೀವನ ನಡೆಸಬೇಕಾದರೆ ಬಹಳ ಚುರುಕಾಗಿರಬೇಕು. ಒಳ್ಳೆಯ ದೃಷ್ಟಿ ವಾಸನಾ ಬಲಗಳನ್ನು ಹೊಂದಿರಬೇಕು. ಇಂಥ ಪ್ರಾಣಿಗಳಲ್ಲಿ ತೋಳ, ಕೊಯೋಟ್ ಮುಂತಾದುವುಗಳು ಮುಖ್ಯ. ಮೂಷಕಗಳು ಉದ್ದವಾದ ಬಿಲಗಳನ್ನು ಮಾಡಿಕೊಂಡಿರುತ್ತವೆ. ಚಳಿಗಾಲದ ಚಳಿಯನ್ನೂ ವೈಶಾಖದ ಬಿಸಿಲನ್ನೂ ತಡೆಯಲು ಇಲ್ಲಿನ ಪ್ರಾಣಿಗಳು ದೃಢವಾಗಿ ಬಲಿಷ್ಟವಾಗಿರಬೇಕು. ಬಿರುಗಾಳಿಯ ಹೊಡೆತ, ಸೂರ್ಯನ ದ್ರವ ಇಂಗಿಸುವ ತಾಪ ಮತ್ತು ಹುಲ್ಲುಗಾವಲಿನ ಬೆಂಕಿಯ ಕಾಟ ಇವೇ ಮೊದಲಾದುವು ಇಲ್ಲಿಯ ಪ್ರಾಣಿಗಳು ಎದುರಿಸಬೇಕಾದ ಅಪಾಯಗಳು. 

	ಮರುಭೂಮಿ : ಮರುಭೂಮಿಗಳು ವಿಶ್ವದ ಅನೇಕ ಕಡೆಗಳಲ್ಲಿ ಇವೆ. ಉತ್ತರ ಆಫ್ರಿಕ, ಆಸ್ಟ್ರೀಲಿಯಾ, ಮಧ್ಯ ಏಷ್ಯ, ಮೆಕ್ಸಿಕೊ ಮತ್ತು ಸಂಯುಕ್ತ ಸಂಸ್ಥಾನದ ವಾಯವ್ಯ ಸರಹದ್ದಿನ ಕೆಲವುಭಾಗ ಇವು ನೈಜ ಮರುಭೂಮಿ ಪ್ರದೇಶಗಳು. ಇಲ್ಲಿ ವಾಸಮಾಡುವ ಪ್ರಾಣಿಗಳು ಮತ್ತು ಬೆಳೆಯುವ ಸಸ್ಯಗಳು ಮರುಭೂಮಿಯ ಕಠಿಣ ಜೀವನಕ್ಕೆ ಹೊಂದಿಕೊಳ್ಳಬೇಕು. ಇಲ್ಲಿನ ಗಿಡಗಳು ದಪ್ಪಕಾಂಡಗಳೂ ಸೂಜಿಮೊನೆಯ ಎಲೆಗಳೂ ಇವೆ. ಜಾಕ್ ಮೊಲ, ಕಾಂಗರೂ ಇಲಿ, ಮರಳುಕಾಡಿನ ಸರ್ಪಗಳು, ಮೃದ್ವಂಗಿಗಳು, ಚೇಳು ಜೇಡ ಇತ್ಯಾದಿಗಳೂ ಕೆಲವು ಕೀಟಗಳೂ ಇಲ್ಲಿನ ಮುಖ್ಯ ಪ್ರಾಣಿಗಳು. ನೀರಿನ ಅಭಾವ, ನೀರನ್ನು ಇಂಗಿಸುವ ಸೂರ್ಯನ ತಾಪ ಇವು ಈ ಗಡಸು ಪರಿಸರದ ಮುಖ್ಯ ತೊಂದರೆಗಳು. ಅನೇಕ ಪ್ರಾಣಿಗಳು ತಮ್ಮ ದೈಹಿಕ ರಚನೆಯ ಮಾರ್ಪಾಟುಗಳಿಂದ ಇವನ್ನು ಎದುರಿಸುತ್ತವೆ. ಕೆಲವು ಸರ್ಪಗಳೂ ಕೀಟಗಳೂ ಒಣಮೂತ್ರವನ್ನು ವಿಸರ್ಜಿಸುವುವಲ್ಲದೆ ಜೀವರಸಪರಿಣಾಮದಿಂದ ಮೂಡಿದ ನೀರನ್ನು (ಮೆಟಬಾಲಿಕ್ ವಾಟರ್) ಬಳಸುತ್ತವೆ. ಬಿಲಗಳಲ್ಲಿ ವಾಸಮಾಡುತ್ತ ರಾತ್ರಿವೇಳೆ ಮಾತ್ರ ಚಟುವಟಿಕೆಯಿಂದಿರುವುದರಿಂದ ಈ ಮರುಭೂಮಿಯ ಕೆಲವು ಪ್ರಾಣಿಗಳು ಸೂರ್ಯನ ಶಾಖದಿಂದ ತಪ್ಪಿಸಿಕೊಳ್ಳುತ್ತವೆ. 

	ಉಷ್ಣವಲಯದ ಮಳೆಯಕಾಡುಗಳು (ಟ್ರಾಪಿಕಲ್ ರೆಯಿನ್ ಫಾರೆಸ್ಟ್ಸ್) : ಪ್ರಪಂಚದ ಉಷ್ಣವಲಯದ ಮಳೆ ಹೆಚ್ಚಾಗಿ ಬೀಳುವ ಪ್ರದೇಶಗಳಲ್ಲೆಲ್ಲ ಸಂಪದ್ಭರಿತ ಕಾಡುಗಳು ಬೆಳೆದಿರುತ್ತವೆ. ಅಲ್ಲಿ ಪ್ರಾಣಿವರ್ಗವೂ ಯಥೇಷ್ಛವಾಗಿವೆ. ಮಧ್ಯ ಆಮೆರಿಕ, ದಕ್ಷಿಣ ಅಮೆರಿಕದ ಉತ್ತರಭಾಗ, ಮಧ್ಯ ಆಫ್ರಿಕ, ಆಗ್ನೇಯ ಏಷ್ಯ, ಪೂರ್ವ ಇಂಡೀಸ್ ಮತ್ತು ನೆರೆಯ ದ್ವೀಪಗಳು ಇವೇ ಆ ಪ್ರದೇಶಗಳು. ಉತ್ತರದ ಇತರ ಅರಣ್ಯಗಳಿಂದ ಈ ಉಷ್ಣವಲಯದ ಮಳೆಯಕಾಡುಗಳು ಭಿನ್ನವಾಗಿರುವುದು ಸ್ಪಷ್ಟವಾಗಿ ಕಾಣುತ್ತವೆ. ಉತ್ತರದ ಅರಣ್ಯಗಳು ಕೆಲವೇ ಜಾತಿಯ ಮರಗಳಿಂದ ಕೂಡಿವೆ. ಮರಗಳು ಬೆಳೆಯುವ ಎತ್ತರದಲ್ಲೂ ವ್ಯತ್ಯಾಸ ಇರುವುದರಿಂದ ಅವುಗಳ ವರಿಸೆಯಿಂದಲೇ ಗುರುತಿಸಬಹುದು. ಈ ಕಾಡುಗಳಲ್ಲಿ ಅತ್ಯಂತ ಎತ್ತರದ ಮರಗಳು, ಮೇಲ್ಚಾವಣಿಯಂತೆ ಬೆಳೆದಿರುವುದನ್ನೂ ಅವಕ್ಕಿಂತ ಕಡಿಮೆ ಎತ್ತರದ ಮರಗಳು, ಮಧ್ಯಂತರ ಎತ್ತರದ ಮರಗಳೂ, ಕುರುಚಲು ಗಿಡಗಳು ಇವೆಲ್ಲ ವರಿಸೆಗಳಂತೆ ಕಂಡುಬರುತ್ತವೆ. ಮರದಿಂದ ಮರಕ್ಕೆ ಹಬ್ಬುವ ಬಳ್ಳಿಗಳೂ ಅಸಂಖ್ಯಾತವಾಗಿವೆ. ಅದರಿಂದ ನೆಲದ ಬಳಿ ಬೆಳಕು ಕಡಿಮೆ ಪ್ರಮಾಣದಲ್ಲಿರುತ್ತದೆ. ಗಿಡ ಮರಗಳು ತಮ್ಮ ಆಹಾರವನ್ನು ತಯಾರಿಸಲು ಸೂರ್ಯನ ಬೆಳಕು ಅತಿಮುಖ್ಯವಾದ್ದರಿಂದ ಆ ಬೆಳಕನ್ನು ಪಡೆಯಲು ಮೇಲೆ ಮೇಲಕ್ಕೆ ಬೆಳೆಯುತ್ತ ಹೋಗುತ್ತವೆ. ಹಾಗಿಲ್ಲದಿದ್ದರೆ ಆಹಾರ ತಯಾರಿಕೆಯ ಶಕ್ತಿಯೇ ನಶಿಸಿಹೋದೀತು. ಸಸ್ಯಗಳಂತೆ ಈ ಅರಣ್ಯಗಳಲ್ಲಿ ಹಲವಾರು ಜಾತಿಯ ಪ್ರಾಣಿಗಳು ವೃಕ್ಷವಾಸದ ಜೀವನಕ್ಕೆ ಹೊಂದಿಕೊಂಡಿದೆ. ಹೀಗೆಯೇ ಹುಳುಗಳಲ್ಲೂ ಅಸಂಖ್ಯಾತ ಜಾತಿಗಳಿವೆ. ಇರುವೆ ಮತ್ತು ಗೆದ್ದಲುಗಳಲ್ಲೇ ಬೇಕಾದಷ್ಟು ವೈವಿಧ್ಯ ಉಂಟು. ವರ್ಣರಂಜಿತ ಪಕ್ಷಿಗಳು ಎಲೆಗಳ ಗುಂಪಿನಲ್ಲಿ ಅಡಗಿವೆ. ವೃಕ್ಷವಾಸದ ಪ್ರಾಣಿಗಳು ಮರದಿಂದ ಮರಕ್ಕೆ ಚಲಿಸಲು ಕೆಲವು ವಿಶೇಷ ಅಂಗಗಳನ್ನು ಪಡೆದಿವೆ. ಈ ಉಷ್ಣವಲಯದ ವರ್ಷಾರಣ್ಯದ ಪ್ರಾಣಿಗಳ ಮತ್ತು ಸಸ್ಯಗಳ ವೈವಿಧ್ಯವನ್ನು ಮತ್ತಾವ ಪರಿಸರದಲ್ಲೂ ಕಾಣಲಾರೆವು. ಅಮೆರಿಕದ ಉಷ್ಣವಲಯದ ಈ ಮಳೆಯ ಕಾಡುಗಳ ಪ್ರಾಣಿಗಳಲ್ಲಿ ಕೋತಿಗಳು, ಒಸಿಲಾಟ್ ಮುಂಗುಸಿಗಳು, ಸ್ಲಾತ್ ಕರಡಿ, ಬೋವ ಹೆಬ್ಬಾವು ಮತ್ತು ಸೈನಿಕ ಇರುವೆಗಳು ವಿಶೇಷ ರೀತಿಯ ಪ್ರಾಣಿಗಳು. 

	ಇಂಥ ಸಮೃದ್ಧ ಅರಣ್ಯದಲ್ಲಿ ಹತೋಟಿಯ ಪ್ರಮುಖ ಅಂಶವೆಂದರೆ ಸ್ಪರ್ಧಾ ಮನೋಭಾವ. ಸಸ್ಯಾದಿಗಳಲ್ಲಿ ಬೆಳಕನ್ನು ಪಡೆಯಲು ಸತತ ಹೋರಾಟವೂ ಪ್ರಾಣಿಗಳಲ್ಲಿ ಶತ್ರುಬಾಧೆಯಿಂದ ತಪ್ಪಿಸಿಕೊಳ್ಳುವ ಯತ್ನವೂ ಎದ್ದು ಕಾಣುತ್ತವೆ. 

	ಅಲ್ಪ ಪ್ರಮಾಣ ಪ್ರದೇಶದ ವಾತಾವರಣ : ಸಮಶೀತೋಷ್ಣವಲಯದ ಪರ್ವತ ಪ್ರದೇಶಗಳಲ್ಲಿ ಉತ್ತರದ ತುದಿಯ ಪ್ರದೇಶಗಳ ಸ್ವಭಾವವನ್ನೇ ಕಾಣುತ್ತೇವೆ. ಈ ಪ್ರದೇಶಗಳು ವಿಶಾಲವಾಗಿರುವುದಕ್ಕಿಂತ ಎತ್ತರವಾಗಿದೆ. ಈ ಪ್ರದೇಶಗಳನ್ನು ಪರ್ವತಪ್ರದೇಶದ ಜೌಗುಭಾಗ ಮತ್ತು ಪರ್ವತಪ್ರದೇಶದ ಮೊನಚಾದ ಮರಗಳ ಕಡು ಎಂಬುದಾಗಿ ವಿಭಾಗಿಸಬಹುದು. ಈ ಭಾಗಗಳು ಸಾಮಾನ್ಯವಾಗಿ ಸ್ವಭಾಗದಲ್ಲಿ ಉತ್ತರಪ್ರದೇಶದ ಭಾಗಗಳನ್ನೇ ಹೋಲುತ್ತವೆ. ಅಲ್ಲದೆ ಕಡಿಮೆ ಪ್ರಮಾಣದ ಆಕ್ಸಿಜನ್ನಿನ ಒತ್ತಡ, ತೀವ್ರವಾಯುಶಕ್ತಿ ಈ ಅಂಶಗಳಲ್ಲೂ ಹೋಲಿಕೆ ಇದೆ. ಸಸ್ಯವರ್ಗ ಮತ್ತು ಪ್ರಾಣಿವರ್ಗಗಳು ಉತ್ತರಭಾಗದ ಸಸ್ಯ ಮತ್ತು ಪ್ರಾಣಿವರ್ಗಕ್ಕೆ ಹೋಲುವುದಾದರೂ ಈ ಭಾಗದಲ್ಲಿ ದೊಡ್ಡ ಪ್ರಾಣಿಗಳು ಕಡಿಮೆ. ಬೇಸಗೆಯಲ್ಲಿ ಮರಗಳು ತಮ್ಮ ಎಲೆಗಳನ್ನು ಕಳೆದುಕೊಳ್ಳುವುದರಿಂದ ಇವಕ್ಕೆ ಉಷ್ಣವಲಯದ ಪರ್ಣಪಾತಿ ಕಾಡುಗಳೆಂದು ಹೆಸರು. ಭಾರತದ ಮುಂಗಾರಿನ ಬೃಹದಾರಣ್ಯಗಳು, ಮೆಕ್ಸಿಕೋ ದೇಶದ ಪಶ್ಚಿಮ ಕರಾವಳಿ ಈ ವರ್ಗಕ್ಕೆ ಸೇರಿದ ಪ್ರದೇಶಗಳು. 

	ಚಾಪರಾಲಾ ಕಾಡುಗಳು (ಭೂಮಧ್ಯ ಪ್ರದೇಶದ ವಾಯುಗುಣದ ಭಾಗಗಳು) : ಭೂಮದ್ಯ ಸಾಗರದ ತೀರ ಪ್ರದೇಶದಲ್ಲಿಯೂ ಕ್ಯಾಲಿಫೋರ್ನಿಯ ಮತ್ತು ಅರಿಜೋನ ಪ್ರಾಂತ್ಯದ ಭಾಗಗಳಲ್ಲಿಯೂ ಈ ಕಾಡುಗಳನ್ನು ಕಾಣುತ್ತೇವೆ. ಮಳೆಗಾಲದ ಅತಿವೃಷ್ಟಿ, ಕುರುಚಲು ಸಸ್ಯವರ್ಗ, ಅಲ್ಲಲ್ಲಿ ದೊಡ್ಡ ದೊಡ್ಡ ಮರಗಳು ಇವು ಈ ಕಾಡಿನ ಲಕ್ಷಣಗಳು. ಆದ್ದರಿಂದ ಮಾನವ ಈ ಪ್ರದೇಶದಲ್ಲಿ ಪ್ರಮುಖವಾಗಿ ಕಿತ್ತಳೆ, ನಿಂಬೆ ಮುಂತಾದ ಜಂಬೀರಜಾತಿಯ ಗಿಡಗಳನ್ನು ಕೃಷಿಮಾಡಿದ್ದಾನೆ. ಉತ್ತರ ಪ್ರದೇಶದಲ್ಲಿ ಘ್ಲೋರಿಡಾದ ಮಧ್ಯಭಾಗದಲ್ಲಿಯೂ ನ್ಯೂಜಿಲೆಂಡಿನ ಕೆಲವು ಭಾಗಗಳಲ್ಲೂ ಸಮಉಷ್ಣದ ಈ ಅರಣ್ಯಗಳು ವಿಸ್ತಾರವಾಗಿ ಬೆಳೆದಿದೆ. ಸಮೃದ್ಧವಾದ ಸಸ್ಯವರ್ಗ, ಎಲೆಗಳ ಪದರಗಳು, ಮರಗಳ ಸಂಪತ್ತು ಮತ್ತು ಪ್ರಾಣಿಗಳ ವೈವಿಧ್ಯಮಯ ಜೀವನ-ಇವು ಇಲ್ಲಿನ ವಿಶಿಷ್ಟ ಲಕ್ಷಣಗಳು. 

	ಸಾಹಚರ್ಯದ ಅನುಕ್ರಮ (ಕಮ್ಯೂನಿಟಿ ಸಕ್ಸೆಷನ್) : ಎಲ್ಲ ಜೀವಾವರಣ ಸಾಹಚರ್ಯಗಳೂ ಒಂದು ಆಸ್ಫೋಟನೆಯ ಸ್ಥಿತಿಯಲ್ಲಿವೆ ಎಂದರೆ ಅವುಗಳ ಪರಿಮಿತಿಯಲ್ಲಿ ಅವು ಸತತವಾಗಿ ಪರಿವರ್ತನೆ ಹೊಂದುತ್ತಲೆ ಇವೆ. ಈ ಬದಲಾವಣೆಗಳನ್ನು ಹಗಲಿನಿಂದ ಇರುಳಿಗೆ, ಋತುವಿನಿಂದ ಋತುವಿಗೆ, ವರ್ಷದಿಂದ ವರ್ಷಕ್ಕೆ ಗುರುತಿಸಬಹುದು. ಹಗಲು ಇರುಳಿನ ಬದಲಾವಣೆಗಳು ಪ್ರಾಣಿಗಳ ಸ್ವಭಾವದಲ್ಲಿ ಪ್ರತ್ಯಕ್ಷವಾಗಿ ಗೋಚರಿಸುತ್ತವೆ. ವಿವಿಧ ಪ್ರಾಣಿಗಳ ಚಲನೆ ವಿವಿಧ ಕಾಲಗಳಲ್ಲಿ, ಬಹುಪಾಲು ಸಸ್ತನಿಗಳು ಹಗಲಿನಲ್ಲಿ ವಿಶ್ರಾಂತಿಪಡೆದು ರಾತ್ರಿಯಲ್ಲಿ ಆಹಾರ ಹುಡುಕಲು ಹೊರಡುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಪಕ್ಷಿಗಳು ಹಗಲಿನಲ್ಲಿ ಸಂಚರಿಸುತ್ತವೆ. ಬೇರೆ ಬೇರೆ ಕಾಲಗಳಲ್ಲಿ ಕ್ರಿಯಾಶೀಲರಾಗಿರುವ ಪ್ರಾಣಿಗಳು ಅಗತ್ಯಕ್ಕೆ ತಕ್ಕಂತೆ ಸ್ವಭಾವದಲ್ಲಿ ವ್ಯತ್ಯಾಸ ಹೊಂದಿವೆ. ಆ ಪ್ರದೇಶದಲ್ಲಿ ಋತುಭೇದಗಳು ಸ್ವಾಭಾವಿಕವಾಗಿ ಸ್ಪಷ್ಟವಾಗಿ ಗೋಚರಿಸುತ್ತವೆ. ಇದನ್ನು ವಾತಾವರಣದ ಉಷ್ಣದ ವ್ಯತ್ಯಾಸದಿಂದ ಗುರುತಿಸಬಹುದು. ಇದರಿಂದ ಪ್ರಾಣಿಗಳು ಒಂದು ಪ್ರದೇಶದಿಂದ ಇನ್ನೊಂದಕ್ಕೆ ಸಾಮೂಹಿಕವಾಗಿ ಚಲಿಸುತ್ತವೆ. ಚಳಿಗಾಲದಲ್ಲಿ ನಿಶ್ಚೇಷ್ಚಿತವಾಗುವ ಪ್ರಾಣಿಗಳ ನಿಷ್ಕ್ರಿಯತೆಯೂ ಬದಲಾವಣೆ ಹೊಂದುವ ಮೂಲಗಳ ವರ್ಣ ಪರಿವರ್ತನೆಯೂ ಇದರ ಫಲಿತಾಂಶ. ತುತ್ತ ತುದಿಯಲ್ಲಿನ ಜೀವಿಗಳಲ್ಲಿ ಅನೇಕ ವರ್ಷಗಳ ಅವಧಿಯಲ್ಲಿ ಕಂಡುಬರುವ ಬದಲಾವಣೆಗಳಿಗಿಂತ ಅವು ವಾತಾವರಣಕ್ಕೆ ಹೊಂದಿಕೊಳ್ಳಲು ಅನುಸರಿಸುವ ನಿತ್ಯಪರಿವರ್ತನೆಗಳು ಕಡಿಮೆಯೇನಲ್ಲ. ಬದಲಾವಣೆಗಳಲ್ಲಿ ಹೆಚ್ಚು ಪ್ರಸಿದ್ಧವಾದದ್ದೆಂದರೆ ಏಕಮಾದರಿಯ ಕಡೆಗೆ ಸ್ನೇಹ ಬೆಳೆಸುವ ಎಲ್ಲ ಜೀವಿಗಳ ಪರಿವರ್ತನೆ. ಇಂಥ ಸಹಜೀವನದಲ್ಲಿ ಎಲ್ಲಿಯ ವರೆಗೆ ಹವೆ ಬದಲಾಗುವುದಿಲ್ಲವೋ ಅಲ್ಲಿಯವರೆಗೆ ಅದೇ ಪ್ರಮಾಣದಲ್ಲಿ ಬದಲಾವಣೆ ನಿಲ್ಲುತ್ತವೆ. ಬೀಚು ದಾರುವಿನ (ಬೀಚ್) ಸಹಜೀವನದ ಅಂತರದಲ್ಲಿ ಆದ ಎಲ್ಲ ಅಭಿವೃದ್ಧಿ ಕೊನೆಯಲ್ಲಿ ಬೀಚ್ ಮರಗಳ ಅರಣ್ಯದಲ್ಲಿ ಅಂತ್ಯಗೊಳ್ಳುತ್ತದೆ. ಅಂಥ ಅರಣ್ಯಕ್ಕೆ ತುತ್ತ ತುದಿಯ ಸಾಹಚರ್ಯ ಅಥವಾ ಸಹವಾಸಿತ್ವ ಎಂದು ಹೆಸರು. ಅಭಿವೃದ್ಧಿಯ ಅಥವಾ ಮುಪ್ಪಿನ ಅವಸ್ಥೆಗಳಿಗೆ ಒಡನಾಡಿಗಳು (ಅಸ್ಸೋಸೀಸ್) ಎಂದು ಹೆಸರು. ಈ ಎಲ್ಲ ಅವಸ್ಥಾಂತರಗಳಿಗೆ ಅಂತಿಮಾವಸ್ಥೆಯೂ ಸೇರಿ ಸೀರ್ ಎಂದು ಹೆಸರು. ಪ್ರತಿಯೊಂದು ಸಾಹಚರ್ಯದಲ್ಲಿ ವಿವಿಧ ಅಭಿವೃದ್ಧಿ ಹಂತಗಳು ಕಾಣಿಸಿಕೊಳ್ಳುತ್ತವೆ. ಅನೇಕ ವೇಳೆ ಈ ಅಂತ್ಯ ಮಂಜುಗಡ್ಡೆಯ ಯುಗದ ಅವಶೇಷದಂತೆ ಇರುವ ಸಣ್ಣ ಕೊಳವಾಗಿಯೋ ಕೆರೆಯಾಗಿಯೋ ಆರಂಭವಾಗುತ್ತದೆ. ವರ್ಷಗಳು ಉರುಳಿದಂತೆ ನೀರಿನ ಮೈ ಕ್ರಮೇಣ ತುದಿಯಿಂದ ಸಸ್ಯರೂಪದಿಂದ ತುಂಬಿಕೊಳ್ಳುತ್ತದೆ; ಮೊದಲ ಹಂತ ಅಥವಾ ಮೊದಲ ಸಂಗಾತಿಗಳು ಸೂರ್ಯಮೀನಿನ (ಸನ್‍ಫಿಷ್), ಅಕಶೇರುಕ ಜಲಚರ ಪ್ರಾಣಿಗಳ ಮತ್ತು ನೀರಿನಲ್ಲಿ ಮುಳುಗಿರುವ ಸಸ್ಯಸಂಖ್ಯೆಯಿಂದ ತುಂಬಿದ ತೆರೆದ ನೀರಿನ ಭಾಗವಾಗಿದೆ. ಮುಂದಿನ ಸಂಗಾತಿಗಳೆಂದರೆ ಮೊನಚಾದ ಬಳ್ಳಿಗಳು ಮತ್ತಿತರ ಸಸ್ಯಗಳು ಕೂಡಿ ಕಾಣಿಸಿಕೊಂಡು ಕೊಳವನ್ನು ಪಾಚಿಮಯವಾಗಿ ಮಾಡುತ್ತವೆ. ಈ ಸಹವಾಸದಲ್ಲಿ ಬಿಲ ತೋಡುವ ಸಿಗಡಿ, ಕಪ್ಪರ ಸುಂಟೆ, ದ್ವಚರ ಪ್ರಾಣಿಗಳು ಮತ್ತು ತೇವವನ್ನು ಬಯಸುವ ಕೆಂಪು ರೆಕ್ಕೆಯ ಹಕ್ಕಿಗಳು ಜನ್ಮತಾಳುತ್ತವೆ. ಇಂಥ ನೆಲದ ಮೇಲೆ ಕೆಲವು ಮಾದರಿ ಗಿಡಗಳು ಆಹಾರ ಪಡೆದು ಹುಟ್ಟುತ್ತವೆ. ಕಡೆಯದಾಗಿ ಅನೇಕ ರೀತಿಯ ಮರ, ಪಕ್ಷಿ ಮತ್ತು ವನ್ಯಮೃಗಗಳಿಂದ ಕೂಡಿದ ಅರಣ್ಯವಾಗಿ ರೂಪುಗೊಳ್ಳುತ್ತದೆ. ಕೊನೆಯ ಹಿಂಬದಿಯ ಮಟ್ಟದಲ್ಲಿ ಈ ಸಾಹಚರ್ಯ ಅಂತಿಮ ಘಟ್ಟದ ಸ್ವಭಾವವುಳ್ಳ ಅರಣ್ಯವಾಗಿ ಪರಿಣಮಿಸುತ್ತದೆ. 

	ಅಭಿವೃದ್ಧಿಯ ಇಂಥ ಅಂತಿಮಸ್ಥಿತಿ ಹವೆಯ ಪರಿಸ್ಥಿತಿಯನ್ನನುಸರಿಸಿ ವ್ಯತ್ಯಾಸವಾಗುವ ಕಾಲಾವಧಿಯನ್ನು ತೆಗೆದುಕೊಳ್ಳುತ್ತದೆ. ಒಂದು ಸರೋವರದಿಂದ ಅರಣ್ಯದವರೆಗೆ ನಡೆದುಹೋದರೆ ಅಭಿವೃದ್ಧಿಯ ಎಲ್ಲ ಹಂತಗಳನ್ನೂ ನೋಡಬಹುದು. 

ಚಿತ್ರ-9

 ಇಂಥದೇ ಅಂತಿಮ ಸಾಹಚರ್ಯ ಸ್ಥಿತಿಯಲ್ಲಿ ಪರ್ಯವಸಾನ ಹೊಂದುವ ಒಂದು ಸಿಯರ್‍ನ ಸ್ಥಿತಿಯೂ ಸಾಧಾರಣ ನೆಲದಿಂದ ಆರಂಭವಾಗಬಹುದು. ಮಿಚಿಗನ್ ಸರೋವರದ ಮರಳಿನ ಕಣಗಳಲ್ಲಿ ಪ್ರಾಥಮಿಕ ಸ್ಥಿತಿ ಬರಿಯ ಮರಳು. ಅದು ಕೂಡಲೆ ಹಬ್ಬುವ ಹುಲ್ಲಿನಿಂದ ಆವರಿಸಲ್ಪಡುತ್ತದೆ. ಈ ಹುಲ್ಲು ಮರಳನ್ನು ಹಿಡಿಯುವುದರಿಂದ ಬೀಚ್ ಸಸ್ಯಗಳು ಮತ್ತು ಹತ್ತಿ ಮರಗಳು ಕ್ರಮೇಣ ಪದಾರ್ಪಣ ಮಾಡುತ್ತವೆ. 

ಚಿತ್ರ-10

 ತತ್ಪರಿಣಾಮವಾಗಿ ಓಕ್, ಪೈನ್ ಮತ್ತು ಇತರ ಜಾತಿಯ ಮರಗಳ ಕಾಡಿಗೆ ಜಾಗ ಸಿದ್ಧವಾಗುತ್ತದೆ. ಕೊನೆಗೆ ಇವನ್ನು ಅಂತಿಮಾವಸ್ಥೆಯ ಅರಣ್ಯ ಆಕ್ರಮಿಸುತ್ತದೆ. ಈ ಎಲ್ಲ ಸ್ಥಿತ್ಯಂತರಗಳೂ ಸಸ್ಯಮಾದರಿಗಳಿಂದ ಸ್ವಭಾವಪೂರ್ಣವಾದರೂ ಪ್ರತಿಯೊಂದು ಸಾಹಚರ್ಯವೂ ಸಂಗಾತಿಯೂ ಪ್ರಾಣಿಗಳ ಸ್ವಭಾವವನ್ನು ಪಡೆದಿದೆ. 

	ಸಿಹಿನೀರಿನ ಸಾಹಚರ್ಯಗಳು : ಬಹುಪಾಲಿನ ಪ್ರದೇಶಗಳಲ್ಲಿ ವಿವಿಧ ಸಿಹಿನೀರಿನ ಸಾಹಚರ್ಯಗಳು ನೆಲೆಸಿವೆ. ಇವುಗಳೆಲ್ಲ ಸುತ್ತಮುತ್ತಲಿನ ಜೀವಸಮುದಾಯಗಳಿಂದ ವಿಶಿಷ್ಟವಾಗಿ ಪ್ರತ್ಯೇಕಿಸಲ್ಪಟ್ಟಿದ್ದರೂ ತಮ್ಮ ಸ್ವಂತ ಸಹಕ್ರಿಯೆ ಮತ್ತು ಪ್ರತಿಕ್ರಿಯೆಗಳನ್ನು ಪಡೆದಿದ್ದರೂ ಅವು ತಮ್ಮ ಭೌಗೋಳಿಕವಲಯದ ಪ್ರಭಾವಕ್ಕೆ ಒಳಗಾಗುತ್ತವೆ. ತಿಳಿನೀರಿನ ಸಾಹಚರ್ಯದ ಎರಡು ಸಾಧಾರಣ ಮಾದರಿಗಳನ್ನು ಗುರುತಿಸಬಹುದು. ನಿಂತ ನೀರಿನ ಮತ್ತು ಹರಿಯುವ ನೀರಿನ ಸಾಹಚರ್ಯಗಳು, ಸರೋವರಗಳು, ಕೊಳಗಳು ಮತ್ತು ಹಂಗಾಮಿ ಕೊಳ್ಳಗಳು. ಹರಿಯುವ ನೀರಿನ ಸಾಹಚರ್ಯಗಳು ಹರಿಯುವ ನೀರಿನ ಪ್ರಮಾಣ ಮತ್ತು ರಭಸವನ್ನು ಅನುಸರಿಸಿ ವಿಧವಿಧವಾಗಿರುತ್ತವೆ. ಈ ಯಾವುದೇ ಸಾಹಚರ್ಯವನ್ನು ಅಭ್ಯಸಿಸುವುದರಿಂದ ಅದರ ಪ್ರಾಣಿವರ್ಗದ ಕೆಲವು ವಿಚಿತ್ರ ಸ್ವಭಾವಗಳನ್ನು ಕಂಡುಕೊಳ್ಳಬಹುದು. ಬೆಂಥಾಸ್ ಎಂಬ ಸಾಮೂಹಿಕ ಜೀವರಾಶಿಗಳ ಗುಂಪುಗಳಿಗೆ ತಳ ಆಧಾರ ನೀಡುತ್ತದೆ. ತಳದಲ್ಲಿರುವ ಏಕಾಣುಜೀವಿಗಳು, ವಲ್ಕವಂತ ಜೀವಿಗಳು, ಈಸು ಪ್ರಾಣಿಗಳು, ಗೇಸ್ಟ್ರೊಟ್ರಿಕ್ ಜೀವಿಗಳು, ಬಸವನ ಹುಳುಗಳು, ಚಿಪ್ಪು ಮೀನುಗಳು, ಹುಪ್ಪಟೆಗಳು ಮುಂತಾದ ಜೀವರಾಶಿಗಳು ಇದರಲ್ಲಿ ಸೇರಿವೆ. ಬಂಡೆಗಳು ಇದ್ದಾಗ ನಿರ್ವೃಂತವೂ ಬೆನ್ನುಮೂಳೆಯಿಲ್ಲದವೂ ಆದ ಪ್ರಾಣಿಜೀವಿಗಳೂ ಜೊತೆಗೆ ದೊರಕುತ್ತವೆ ನೀರಿನ ಮೇಲುಭಾಗದ ಪ್ರದೇಶದಲ್ಲಿಯೂ ಅದರ ಸ್ವಾಭಾವಿಕ ಸಸ್ಯವರ್ಗಗಳು ಇವೆ. ತೇಲುವ ಸಸ್ಯಜೀವರಾಶಿಗಳಲ್ಲಿ (ಪ್ಲಾಂಕ್‍ಟನ್) ಈಜುವ ಸಾಮಥ್ರ್ಯವುಳ್ಳ ಅಥವಾ ಇಲ್ಲದಿರುವ ಅಪರಿಮಿತ ಸಣ್ಣ ಜೀವಿಗಳೂ ಸೇರಿವೆ. ಸಿಹಿನೀರಿನ ಸಸ್ಯಜೀವಿಗಳಲ್ಲಿ ಅಗಣಿತ ವಲ್ಕವಂತ ಪ್ರಾಣಿಗಳೊ ಅಣುಪ್ರಾಣಿ, ಏಕಾನುಪ್ರಾಣಿ ಮತ್ತಿತರ ಶೈವಲಗಳು ಸಾಹಚರ್ಯದಲ್ಲಿ ಕಂಡುಬರುತ್ತವೆ. ಗಾಳಿಯ ಅಥವಾ ಅಲೆಗಳ ಪ್ರಭಾವಕ್ಕೆ ಒಳಗಾಗದ ಜೀವರಾಶಿಗಳ ಗುಂಪೂ ಅದರಲ್ಲಿವೆ. ಮೀನು, ಕಪ್ಪೆ ಮತ್ತು ಭೂತಾಕಾರದ ಜಲಚರ ಕೀಟಗಳೂ ಸೇರಿವೆ. ಈ ತಿಳಿನೀರಿನ ಸಾಹಚರ್ಯಗಳು ಕುಡಿಯುವ ನೀರಿನ ಆಸರೆಯಾಗಿ ಮೀನು ಇತ್ಯಾದಿಗಳಿಗೆ ಆಹಾರವಾಗಿ ಹೊಸ ಚೇತನದ ಪ್ರದೇಶಗಳಾಗಿ ಅತಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಸಿಹಿನೀರಿನ ಪ್ರಕೃತಿ ಜ್ಞಾನಕ್ಕೆ ಲಿಮ್ನಾಲಜಿ ಎಂದು ಹೆಸರು. 

	ನಿಂತ ನೀರಿನ ಸಾಹಚರ್ಯಗಳು : ನಿಂತ ನೀರಿನ ಸಾಹಚರ್ಯದ ವಿವಿಧ ಮಾದರಿಗಳಲ್ಲಿ ಅತಿ ದೊಡ್ಡ ಸರೋವರಗಳನ್ನು ಅಂತಿಮ ಸಾಹಚರ್ಯಗಳನ್ನಾಗಿ ಪರಿಗಣಿಸಬಹುದು. ನೀರಿನ ಸಣ್ಣ ಸಣ್ಣ ಪ್ರದೇಶಗಳು ಭೌಗೋಳಿಕ ಅಂತಿಮ ಸ್ಥಿತಿಗೆ ತೆರಳುವ ಸಿಯರಿನ ಪ್ರಾರಂಭಿಕ ಅವಸ್ಥೆಗಳು. ಬೃಹದ್ ಭೌಗೋಳಿಕ ಸಾಹಚರ್ಯಗಳಲ್ಲದೆ ಪ್ರತಿ ಶುಭ್ರ ಜಲದ ಸಾಹಚರ್ಯವೂ ಒಂದು ವಿಶಿಷ್ಟ ಗುಂಪು. ಅಂದರೆ ಅದು ವಿಸ್ತøತವಾದ ಪರಿಸರದ ಜೀವಸಂಗತಿಯ ಭಾಗವಲ್ಲ. ಆದ್ದರಿಂದ ಪ್ರತಿ ಸರೋವರವನ್ನೂ ಒಂದು ಅನಂತಸೂಕ್ಷ್ಮ ವಿಶ್ವ(ಮೈಕ್ರೊಕಾಸ್ಮ್) ಎಂದು ಪರಿಗಣಿಸಬಹುದು. ಸರೋವರದ ಅಂತರದಲ್ಲಿ ಕೆಲವು ಭೌತ ಅಂಶಗಳು ಸಸ್ಯ ಮತ್ತು ಪ್ರಾಣಿವರ್ಗದ ಹಂಚಿಕೆಯನ್ನು ಹತೋಟಿಯಲ್ಲಿಟ್ಟುಕೊಳ್ಳುತ್ತವೆ. ಈ ಅಂಶಗಳಲ್ಲಿ ಕರಗಿದ ಆವಿಯ ಎಂದರೆ ಆಕ್ಸಿಜನ್, ಕಾರ್ಬನ್ ಡೈ ಆಕ್ಸೈಡ್, ಕರಗಿದ ಉಪ್ಪು, ಪಿಹೆಚ್ ಆಮ್ಲಾಂಶ, ನೀರಿನ ಕ್ರಿಯೆ, ಉಷ್ಣ, ಚಲನೆ ಮತ್ತು ಬುಡದ ಸ್ವಭಾವ ಇವು ಸೇರಿವೆ. ನಿಂತ ನೀರಿನಲ್ಲಿ ವಾಸಿಸುವ ಪ್ರಾಣಿಗಳು ಎದುರಿಸುವ ಚಳಿಗಾಲದ ಚಳಿ, ಬೇಸಗೆಯ ಬೇಗೆ ಇತ್ಯಾದಿಗಳು ಇತರ ಮುಖ್ಯ ನಿಯಂತ್ರಕ ಅಂಶಗಳು. ದೊಡ್ಡ ಸರೋವರಗಳೂ ಕೂಡ ತೀರ ಪ್ರದೇಶಗಳಲ್ಲಿ ಒಣಗಿಹೋಗುವ ಪ್ರದೇಶಗಳನ್ನು ಹೊಂದಿವೆ. ಈ ಸುತ್ತಮುತ್ತಲಿನ ಪರಿಸರದ ಅಂತಿಮಾವಸ್ಥೆಯನ್ನು ಬೆನ್ನುಮೂಳೆಯಿಲ್ಲದ ಜೀವಿಗಳು ವಿವಿಧ ರೀತಿಯಲ್ಲಿ ಎದುರಿಸುತ್ತವೆ. ಅನೇಕ ಜೀವಿಗಳು ಪ್ರಾರಂಭದ ಮೃದುವಾದ ಅವಸ್ಥೆಗಳನ್ನು ಕಳಚಿಕೊಳ್ಳುವುದೂ ವಿಶಿಷ್ಟ ರೀತಿಯ ವಲ್ಕ ರೂಪವನ್ನು ಹೊಂದುವುದೂ ಉಂಟು. ಏಕೆಂದರೆ ಇದರಿಂದ ಅವು ಚಳಿಯಿಂದ ಬಿರಿದು ಹೋಗುವ ಮತ್ತು ಗೆಡ್ಡೆ ಕಟ್ಟುವ ಸ್ಥಿತಿಯನ್ನು ತಡೆಯಬಲ್ಲ ಬಲ ಪಡೆಯುತ್ತದೆ. ಇತರ ಜಾತಿಗಳು ತಡೆಯಬಲ್ಲ ಶಕ್ತಿಯುಳ್ಳ ಕವಚವಿರುವ ಮೊಟ್ಟೆಗಳನ್ನು ಇಡುತ್ತವೆ. ಇವನ್ನು ಗಾಳಿ ಬಲುದೂರದವರೆಗೆ ಕೊಂಡೊಯ್ಯಬಲ್ಲುದು. ಇದರ ಫಲವಾಗಿ ಸರೋವರದ ಚಿಕ್ಕ ಚಿಕ್ಕ ಪ್ರಾಣಿಗಳು ಮತ್ತು ಸಸ್ಯಗಳು ವಿಶ್ವದಾದ್ಯಂತ ಒಂದೇ ರೀತಿಯಲ್ಲಿರುತ್ತವೆ. ಯಾವುದೇ ಒಂದು ಸರೋವರದಲ್ಲಿ ಕೆಲವು ಜಾತಿಯ ಜೀವಿಗಳು ಇರುವಿಕೆ ಅಥವಾ ಇಲ್ಲದಿರುವಿಕೆ ಮತ್ತಾವುದೇ ನೀರಿನ ಭಾಗದ ಸಾಮೀಪ್ಯಕ್ಕಿಂತ ಹೆಚ್ಚಾಗಿ ಅಲ್ಲಿರುವ ಭೌತ ಪರಿಸ್ಥಿತಿಯನ್ನು ಅವಲಂಬಿಸಿದೆ. 

	ಸಮಉಷ್ಣವಲಯದ ಸರೋವರಗಳು ಒಂದು ವರ್ಷದ ಕಾಲಾವಧಿಯಲ್ಲಿ ಖಚಿತವಾದ ಉಷ್ಣಚಕ್ರದ ಸಂಬಂಧವನ್ನು ಹೊಂದಿವೆ. ಈ ಅಸಾಧಾರಣ ಸಂಬಂಧ ನೀರಿನ ವಿಚಿತ್ರ ಸ್ವಭಾವಕ್ಕೆ ಮೂಲತಃ ಕಾರಣ. ನೀರು 40 ಸೆಂ.ಗ್ರೇ. ಉಷ್ಣತೆಯ ಸಮೀಪದಲ್ಲಿ ಅತಿಭಾರವಾಗಿರುತ್ತದೆ; ಎಂದರೆ ನೀರು ಘನಿಭೂತವಾಗುವ ಸ್ಥಿತಿಗಿಂತ ಸ್ವಲ್ಪ ಮೇಲ್ಮಟ್ಟದಲ್ಲಿರುತ್ತದೆ. ಈ ಅಪಾಯದ ಮಟ್ಟದ ಮೇಲೆ ಅಥವಾ ಅಂತರದಲ್ಲಿ ಅದು ಲಘುವಾಗಿರುತ್ತದೆ ; ಶಿಶಿರ ಋತುವಿನಲ್ಲಿ ನೀರಿನ ಮೇಲುಭಾಗ ಮಂಜಿನ ಹಾಸಿನಿಂದ ಕೂಡಿರುತ್ತದೆ. ಇದರ ಕೆಳಗೆ ನೀರಿನ ಉಷ್ಣತೆ ಸಾಧಾರಣವಾಗಿ ಒಂದೇ ಪ್ರಮಾಣವುಳ್ಳದ್ದು. ಅಲ್ಲಿ ಉಷ್ಣ ಚಲನೆ (ಥರ್ಮಲ್) ಇರಬಹುದು, ಇಲ್ಲದಿರಬಹುದು. ಈ ಸಮಯದಲ್ಲಿ ಆಕ್ಸಿಜನ್ ಸಾಧಾರಣವಾಗಿ ಇಂಗಿ ಹೋಗಿರುತ್ತದೆ. ಶೀತರಕ್ತ ಪ್ರಾಣಿಗಳ ಶರೀರದ ಕ್ರಿಯೆಗಳು ಕಡಿಮೆ ಪ್ರಮಾಣದಲ್ಲಿರುವುದರಿಂದ ಅಕ್ಸಿಜನ್ನಿನ ಅಭಾವ ಯಾವ ಹೆಚ್ಚಿನ ಪರಿಣಾಮವನ್ನೂ ಬೀರಲಾರದು. ವಸಂತದಲ್ಲಿ ಮಂಜಿನಗೆಡ್ಡೆ ಕರಗುವುದರಿಂದ ನೀರಿನ ಮೇಲು ಪದರ ಕ್ರಮೇಣ ಭಾರವಾಗುತ್ತ ಬರುತ್ತದೆ. ಅಲ್ಲದೆ ಗಾಳಿ ನೀರಿನ ಮೇಲು ಪದರವನ್ನು ದಡಕ್ಕೆ ಒಗೆಯುವುದರಿಂದ ಅದು ಅಲ್ಲಿ ರಾಶಿಯಾಗಿ ಬುಡದಲ್ಲಿ ಚಲಿಸುವಂತೆ ಮಾಡುತ್ತದೆ. ಇದು ಕಾಲಕ್ರಮದಲ್ಲಿ ನೀರನ್ನು ಒಳಭಾಗದಲ್ಲಿ ಕೆಳ ಮೇಲು ಮಾಡುವುದರಲ್ಲಿ ಪರಿಣಾಮಗೊಂಡು ಆಕ್ಸಿಜನ್ನಿನ ಹೊಸ ಹೊಂದಾಣಿಕೆಗೆ ಕಾರಣವಾಗುತ್ತದೆ. ವಸಂತದ ಹವೆ ಮುಂದುವರಿದಂತೆ ನೀರಿನ ಮೆಲು ಪದರ ಕಾದು ಹಗುರವಾಗಿ ಚಲನೆ ಮುಂದುವರಿಯುತ್ತದೆ. ಆದರೆ ನೀರಿನ ಕೆಳಪದರ ಹೆಚ್ಚು ಘನೀಭೂತವಾಗಿರುವುದರಿಂದ ಈ ಚಲನೆ ಮುಕ್ತಾಯವಾಗುವುದಿಲ್ಲ. ಇದರ ಪರಿಣಾಮವಾಗಿ ನೀರಿನಲ್ಲಿ ಉಷ್ಣದ ಮಟ್ಟಗಳು ಕಂಡುಬರುತ್ತವೆ. ಇದಕ್ಕೆ ಸಂಬಂಧಿಸಿದಂತೆ ಉಷ್ಣ ಹಂಚಿಕೆಯ ಮಧ್ಯಂತರ ಸ್ಥಿತಿ (ಥರ್‍ಮಾಕ್ಲೈನ್) ಇದ್ದಕ್ಕಿದ್ದಂತೆ ಬದಲಾಯಿಸುತ್ತದೆ. ಈ ಸಂಕುಚಿತ ಪಟ್ಟೆಯ ಮೇಲೆ ಗಾಳಿಯ ಚಲನೆ ನೀರಿನ ಮೇಲಿನ ಪದರವನ್ನು ಚಲಿಸುವಂತೆ ಮಾಡುತ್ತದೆ. ಥರ್‍ಮಾಕ್ಲೈನಿನ ಮೇಲಿನ ಪದರವಾದ ಎಪಿಲಿಮ್ನಿಯನ್ ಆಕ್ಸಿಜನ್ನಿನಿಂದ ತುಂಬಿ ಕ್ರಮಕ್ರಮವಾಗಿ ಉಷ್ಣವಾಗಿದೆ. ಥರ್‍ಮಾಕ್ಲೈನ್ ಕೆಳಗಡೆ ಪದರವಾಗಿ ಹೈಪೂಲಿಮ್ನಿಯನ್ ಆಗಿದೆ. ಇದು ಶೀತಲವಾಗಿ ಕಡಿಮೆ ಅಕ್ಸಿಜನ್ನಿನಿಂದ ಕೂಡಿದೆ. ಈ ಭೌತಸ್ಥಿತಿ ಸರೋವರದಲ್ಲಿ ಜೀವಿಗಳ ಹರಡಿಕೆಯ ಮೇಲೆ ಪ್ರಭಾವ ಬೀರುತ್ತದೆ. ವರ್ಷದ ಅವಧಿ ಕಡಿಮೆ ಆದಂತೆ ನೀರಿನ ಮೇಲ್ಪದರ ತಣ್ಣಗಾಗುತ್ತ ವಾಯುಕ್ರಿಯೆ ಸರೋವರದ ನೀರನ್ನು ಕೆಳಮೇಲು ಮಾಡುತ್ತದೆ. ಶಿಶಿರ ಋತುವಿನ ಅತಿಶೈತ್ಯದ ಈ ಪ್ರಭಾವ ಪ್ರಚಲಿತವಾಗಿ ನೀರು ಹೆಪ್ಪುಗಟ್ಟುವವರೆಗೆ ನಡೆಯುತ್ತದೆ. 

	ಹರಿಯುವ ನೀರಿನ ಸಾಹಚರ್ಯ : ಹರಿಯುವ ನೀರಿನ ಸಾಹಚರ್ಯ ನಿಂತಿರುವ ನೀರಿನ ಸಾಹಚರ್ಯದಿಂದ ಅನೇಕ ಮುಖಗಳಿಂದ ವ್ಯತ್ಯಾಸ ಹೊಂದಿದೆ. ಆದರೆ ಅವು ಪ್ರತ್ಯೇಕವಾಗಿಲ್ಲ. ಸಾಧಾರಣವಾಗಿ ಉಷ್ಣರೂಪದಲ್ಲಿ ಸಂಬಂಧಿಸಿವೆ. ಹಾಗೆ ಸಸ್ಯ ಮತ್ತು ಪ್ರಾಣಿವರ್ಗಗಳು ಯಾವುದೇ ಕ್ರಮ ಅಥವಾ ಪದ್ದತಿಯಲ್ಲಿ ಸ್ವಲ್ಪ ಹೆಚ್ಚೂ ಕಡಿಮೆ ಒಂದು ರೂಪದಲ್ಲಿವೆ. ಕೊಳಕು ಮಿಶ್ರಣದಿಂದ ನಷ್ಟವಾದ ಹೊರತು ಆಕ್ಸಿಜನ್ ಸಾಧಾರಣವಾಗಿ ಯಥೇಚ್ಛವಾಗಿರುತ್ತದೆ, ಅಲ್ಲದೆ ಉಷ್ಣದ ಮಟ್ಟಗಳು (ಥರ್ಮಲ್ ಸ್ಟ್ರಾಟಿಫಿಕೇಷನ್ಸ್) ಇರುವುದಿಲ್ಲ. ತೇಲುಪ್ರಾಣಿಗಳು ಕಡಿಮೆ ಇವೆ. ವಿಶಿಷ್ಟ ರೀತಿಯ ಎರಡು ಮಾದರಿಗನ್ನೂ ಹೊಳೆಯ ಸಾಹಚರ್ಯದಲ್ಲಿ ಗುರುತಿಸಬಹುದು : ಕೊಳ್ಳ (ಪೂಲ್) ಮತ್ತು ಝರಿ (ರಭಸವಾದ ನೀರು-ರ್ಯಾಪಿಡ್ಸ್). ಹೊಳೆಯ ನೀರು ನಿಧಾನವಾಗಿ ಹರಿಯುವುದು. ಅದರ ತಳದಲ್ಲಿ ಮರಳಿನ ಅಥವಾ ಮಣ್ಣಿನ ಅಂಶವೇ ಹೆಚ್ಚು. ಇಂಥ ವರ್ಗಗಳಲ್ಲಿ ಸೂರ್ಯಮೀನು, ಮಾರ್ಜಾಲಮೀನು, ಅಗಣಿತ ಸೊಳ್ಳೆ ಮೀನು (ಮಿನ್ನೋ), ನಳ್ಳಿಗಳು, ಅನೇಕ ಹುಳುಗಳು ಮತ್ತು ಪ್ರಾಣಿಗಳ ಮರಿಗಳು ಇವೆ. ರಭಸವಾಗಿ ಹರಿಯುವ ನದಿಗಳಲ್ಲಿ ಬಂಡೆಗಳ ಮೇಲೆ ಹರಿಯುವ ನೀರಿನ ರಭಸದ ಪ್ರಮಾಣ ಬೇರೆ ಬೇರೆಯಾಗಿದೆ. ಸಣ್ಣ ಸಣ್ಣ ನಿಧಾನವಾಗಿ ಹರಿಯುವ ಝರಿಗಳಿಗೂ ಪರ್ವತದಿಂದ ಧುಮುಕುವ ನಿರ್ಝರಿಗಳಿಗೂ ವ್ಯತ್ಯಾಸವಿದೆ. ಮೇಲೆ ಹೇಳಿದ ನೀರಿನಲ್ಲಿ ಕರಗಿದ ಆಕ್ಸಿಜನ್ ಹೆಚ್ಚು ಪ್ರಮಾಣದಲ್ಲಿದೆ. ಇಲ್ಲಿ ಟ್ರೊಟ್ ಮೀನುಗಳು, ಡಾರ್ಟರ್ ಮುಂತಾದ ಹೆಚ್ಚಿನ ಆಕ್ಸಿಜನ್ ಉಪಯೋಗಿಸುವ ಮೀನುಗಳೂ ಇವೆ. ಕೀಟಸದೃಶ ಹುಳುಗಳು ಹರಿಯುವ ನೀರಿನ ಪ್ರವಾಹವನ್ನು ಎದುರಿಸಲು ಕಲ್ಲುಗಳಿಗೆ ಅಂಟಿಕೊಳ್ಳುವ ಸಲಕರಣೆಯ ಸ್ವಭಾವವನ್ನೂ ದೈಹಿಕ ಮಲಮೂತ್ರಗಳನ್ನು ವಿಸರ್ಜಿಸುವ ವಿಶಿಷ್ಟ ಗೂಡುಗಳನ್ನೂ ಹೊಂದಿವೆ. ನಿಧಾನವಾಗಿ ಹರಿಯುವ ಝರಿ ಮಣ್ಣುನೀರಿನಿಂದ ತುಂಬಿದೆ. ಅದರಲ್ಲಿ ಸ್ಥಿತಿ ಸಾಮಾನ್ಯವಾಗಿ ಸ್ಥಾಯಿ, ಭೌಗೋಳಿಕ ಅಥವಾ ಮಾನವನ ಪ್ರಯತ್ನದಿಂದ ಬದಲಾದರೆ ಆಗಬಹುದು. 

	ಸಾಗರಿಕ ಸಾಹಚರ್ಯಗಳು : ಭೂಮಿಯ ಬಲುಭಾಗವನ್ನು ಸಾಗರ ಆಕ್ರಮಿಸಿಕೊಂಡಿದೆ. ಅದು ಎಷ್ಟು ವಿಸ್ತಾರವಾಗಿದೆಯೆಂದರೆ ಭೌತ ಪರಿಸ್ಥಿತಿಗಳು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವ್ಯತ್ಯಾಸ ಕಾಣಿಸುತ್ತದೆ. ಈ ಬದಲಾವಣೆಯಲ್ಲಿ ಉಷ್ಣ, ಒತ್ತಡ, ಲವಣಾಂಶ, ಗಾಳಿ ಮತ್ತು ಅಲೆಗಳ ಚಲನೆ ಪಾತ್ರವಹಿಸುತ್ತವೆ. ಉಷ್ಣಾಂಶದಲ್ಲಿ ಸಾಮಾನ್ಯವಾಗಿ ಮೇರುಗಳಿಗೂ ಸಮಶೀತೋಷ್ಣವಲಯದ ಸಮುದ್ರಗಳಿಗೂ ವ್ಯತ್ಯಾಸವಿದೆ. ಆಳವಾದ ಪ್ರದೇಶಗಳು ಮೈಲಿಗಳ ಅಂತರದಿಂದ ಪ್ರತ್ಯೇಕಿಸಲ್ಪಟ್ಟಿವೆ. ಇದರ ಪರಿಣಾಮವಾಗಿ ಮೇಲುಪದರದ ಒತ್ತಡ, ಆಳದ ಒತ್ತಡಗಳಿಂದ ಅನೇಕ ಟನ್ನುಗಳಷ್ಟು ಬದಲಾಯಿಸಿದೆ. ಅಷ್ಟೇ ಅಲ್ಲದೆ ದಿವಸದ ಅಲೆಗಳ ಚಲನೆ, ನದಿನೀರಿನ ಆಕಾರದ ಪರಮಾಣ, ಅದ್ಭುತವಾದ ಅಲೆಗಳು, ಲವಣಾಂಶಗಳ ವೈವಿಧ್ಯಗಳ ಜೀವಾಧಾರಾಂಶಗಳ (ಸಬ್‍ಸ್ಟ್ರೇಟ) ವೈವಿಧ್ಯ ಇವೆಲ್ಲ ಪ್ರಾಣಿಗಳ ಮತ್ತು ಸಸ್ಯಗಳ ಹಂಚಿಕೆಯನ್ನು ನಿಯಂತ್ರಿಸುತ್ತವೆ. ತಿಳಿನೀರಿನ ನಿವಾಸಗಳಂತಲ್ಲದೆ ಸಾಗರ ಸತತವಾದದ್ದು. ಆದ್ದರಿಂದ ಕೆಲವು ದೊಡ್ಡ ಪ್ರಾಣಿಗಳು ಆ ಪರಿಸರದಲ್ಲಿ ವಿಶಾಲವ್ಯಾಪ್ತಿ ಪಡೆದಿದೆ. ಅನೇಕ ಮೀನುಗಳು ಒಂದು ವರ್ಗದಿಂದ ಇನ್ನೊಂದು ವರ್ಗದ ವರೆಗೆ ಇವೆ. ಇಂಥ ಅಂಶಗಳಿಂದ ಉದ್ಭವಿಸುವ ಸಾಗರದ ಪರಿಸರಜ್ಞಾನದ ಕಲ್ಪನೆಯನ್ನು ಭೌಗೋಳಿಕ ಅಥವಾ ತಿಳಿನೀರಿನ ಪರಿಸರವಿಜ್ಞಾನದೊಡನೆ ಸರಿಹೊಂದಿಸುವುದು ಸ್ವಲ್ಪ ಕಷ್ಟ. ಇದು ಭಾಗಶಃ ಅಭ್ಯಾಸದ ತೊಂದರೆಯಿಂದ. ಆದ್ದರಿಂದ ನಮ್ಮ ಅರಿವು ನಿಯಮಿತವಾಗಿದೆ. ಸಾಗರದ ನೀರಿನಲ್ಲಿರುವ ಕ್ಷಾರದಸಾಂದ್ರತೆ ಪ್ರೋಟೊಪ್ಲಾಸ್ಮ್ ಅಥವಾ ಜೀವಸತ್ತ್ವಕ್ಕೆ ಸಮೀಪವಾಗಿರುವುದರಿಂದ ಪರಿಸ್ಥಿತಿಗಳು ತಿಳಿನೀರಿನಲ್ಲಿರುವಂತೆ ದುಸ್ತರವಾಗಿಲ್ಲ. ಇದರಿಂದ ಬೆನ್ನುಮೂಳೆಯಿಲ್ಲದ ಅನೇಕ ಪ್ರಾಣಿಗಳು ತಮ್ಮ ಡಿಂಬಾವಸ್ಥೆಯಲ್ಲಿ ಸ್ವೇಚ್ಛೆಯಾಗಿ ಈಜಾಡಲು ಸಾಧ್ಯವಾಗುತ್ತದೆ. ತಿಳಿನೀರಿಗೂ ಸಾಗರದ ತೇಲುಪ್ರಾಣಿಗಳಿಗೂ ಡಿಂಬರೂಪಗಳಲ್ಲಿ ಮುಖ್ಯ ವ್ಯತ್ಯಾಸವುಂಟು. ಸಾಹಚರ್ಯದ ಅಂತರ್ಯಕ್ರಿಯೆಯ ತೊಡಕಿದ್ದರೂ ಸಾಗರದ ತಳದಲ್ಲಿ ಕೆಲವು ಖಚಿತವಾದ ಜೀವವಲಯಗಳನ್ನು ಗುರುತಿಸಬಹುದು. 

	ಚೆನ್ನಾಗಿ ತಿಳಿದಿರುವ ಮತ್ತು ಸ್ಪಷ್ಟವಾಗಿ ಅಭ್ಯಾಸ ಮಾಡಿರುವ ಸಂಕುಚಿತ ಅಂತರ ಅಲೆಗಳ ವಲಯ : ಇದು ತೀರದ ಬಳಿಯ ವಲಯದ ಭಾಗ. ತೀರದ ಹೊರಮುಖದಿಂದ 50 ಮೀಟರ್‍ಗಳ ಆಳದವರೆಗೆ ವಿಸ್ತರಿಸಿರುತ್ತದೆ. ಈ ಭಾಗ ಕ್ರಮೇಣ ತೀರದ ಉಪವಲಯಕ್ಕೆ ಪ್ರವೇಶಿಸಿ ಕಾಂಟಿನೆಂಟಲ್ ಭಾಗಕ್ಕೆ ಸೇರುತ್ತದೆ. ಕಾಂಟಿನೆಂಟಲ್ ಭಾಗದ 200 ಮೀಟರ್ ಇಳಿಜಾರು ಪ್ರದೇಶ ಬಲುಕಡಿದಾಗಿ ಕೂಡಲೇ ಆರ್ಕಿಬೆಂಥಿಕ್ ವಲಯವಾಗಿ ಪರಿಣಮಿಸುತ್ತದೆ. ಇದು 2000 ಮೀಟರುಗಳಷ್ಟು ಆಳದವರೆಗೂ ಹೋಗುತ್ತದೆ. ಇದರ ತಳದಲ್ಲಿ ಅಬಿಸಲ್‍ಬೆಂಥಿಕ್‍ವಲಯವಿದೆ. ಅದು ತುಂಬ ಆಳದ ತಳದವರೆಗೂ ವಿಸ್ತರಿಸುತ್ತದೆ. ತೀರದ ಉಪವಲಯದ ಮೇಲ್ಭಾಗದ ನೀರು ನೆರೆಟಿಕ್ ಪ್ರಾಂತವಾಗಿ ಇರುತ್ತದೆ. ಕಾಂಟಿನೆಂಟಲ್ ಭಾಗದ ಆಳವಾದ ಸಮುದ್ರದ ಮೇಲ್ಭಾಗವನ್ನು ಸಾಗರದ ಪ್ರಾಂತ ಎಂದು ಕರೆಯುತ್ತಾರೆ. 

ಚಿತ್ರ-11

	ತೀರವಲಯ (ಯುಲಿಟ್ಟೋರಲ್ eóÉೂೀನ್) : ಅತಿ ಎತ್ತರದ ಅಲೆಯ ಗುರುತಿನಿಂದ 50 ಮೀಟರ್ ಆಳವಿರುವ ಪ್ರದೇಶದ ಭಾಗವನ್ನು ತೀರವಲಯ ಎನ್ನಬಹುದು. ಈ ತೀರವಲಯದ ದಡದ ಭಾಗ ಪ್ರತಿದಿವಸವೂ ಹಗಲು, ರಾತ್ರಿ ಎರಡು ಸಲ ನೀರಿನ ಅಲೆಯಿಂದ ಆವರಿಸಿ ಬಿಡುಗಡೆ ಹೊಂದುತ್ತದೆ. ಈ ಅಲೆಯ ಕ್ರಿಯೆ ಉಷ್ಣ, ಬೆಳಕು, ತಿಕ್ಕಾಟ ಮತ್ತು ಲವಣಾಂಶ ಇವುಗಳ ಸ್ಪಷ್ಟ ಬದಲಾವಣೆಗಳಲ್ಲಿ ಪರಿಣಾಮ ಹೊಂದುತ್ತದೆ. ಕಣ್ಣಿಗೆ ಕಾಣುವ ಅನಾನುಕೂಲದ ಈ ಪರಿಸ್ಥಿತಿಯಿದ್ದರೂ ಅಲೆಯ ಅಂತರ್ವಲಯ ಜೀವ ಚೈತನ್ಯದಿಂದ ತುಂಬಿದೆ. ಅಲ್ಲಿ ವಾಸಮಾಡುವ ಪ್ರಾಣಿಗಳು ಒಣಗಿ ಹೋಗುವ ಪ್ರಭಾವವನ್ನೂ ತಪ್ಪಿಸಿಕೊಳ್ಳುವ ಯಾವುದೋ ಒಂದು ವಿಧಾನವನ್ನೂ ಪಡೆದಿವೆ. ಕೆಲವು ಕೊರೆಯುವ ಹುಳುಗಳು ಬಿಲಗಳಲ್ಲೂ ಇನ್ನು ಕೆಲವು ಶಂಖಗಳೊಳಗೂ ಅಡಗಿ ಬದುಕುತ್ತವೆ. ಮತ್ತೆ ಕೆಲವು ಬಂಡೆಗಳ ಸಂದಿಗಳಿಗೆ ತೆವಳಿಕೊಂಡು ಹೋಗುತ್ತವೆ. ಇಲ್ಲವೆ ಕೆಲವು ರಕ್ಷಕ ವಸ್ತುಗಳ ಮರೆಹೋಗುತ್ತವೆ. 

	ಜೀವಾಧಾರಾಂಶಗಳನ್ನು ಆಧರಿಸಿ ಮೂರು ರೀತಿಯ ನಿವಾಸಗಳನ್ನು (ಹ್ಯಾಬಿಟ್ಯಾಟ್ಸ್) ಗುರುತಿಸಬಹುದು : ಕಲ್ಲುಬಂಡೆಯ ತೀರಗಳು, ಮರಳಿನ ತೀರಗಳು ಮತ್ತು ಮಣ್ಣಿನ ತೀರಗಳು. ನಾಲ್ಕನೆಯ ಮಾದರಿಯೂ ಇರಬಹುದು. ಅದು ಕಡೆಯ ಎರಡು ರೀತಿಯ ಮಿಶ್ರಣದ್ದಾಗಿರುವ ತೀರ. ಇಂಥ ಬೇರೆ ಬೇರೆ ತೀರ ಪ್ರದೇಶಗಳಲ್ಲಿ ಬಂಡೆಗಳ ತೀರ ಅನೇಕ ವಿಧವಾದ ಪ್ರಾಣಿಗಳ ಮತ್ತು ಸಸ್ಯಗಳ ಬೆಳೆವಣಿಗೆಯಿಂದ ತುಂಬಿದೆ. ಬಹುರೀತಿಯ ಶೈವಲಗಳು ಬಂಡೆಗಳಿಗೆ ಅಂಟಿಕೊಂಡಿವೆ. ಅವು ನಾಟಿಕೊಂಡಿರುವ ಪ್ರಾಣಿಗಳಿಗೆ ಎಂದರೆ ಹೈಡ್ರಾಯಿಡ್ಸ್ ಮತ್ತು ಬ್ರಯೋಜೋವ ಪ್ರಾಣಿಗಳಿಗೆ ಪ್ರತಿರೂಪವಾಗಿ ಆಸರೆಯನ್ನು ಒದಗಿಸುತ್ತವೆ. ಅಂತರ ಅಲೆಯ ವಲಯದ ಮೇಲುಭಾಗದಲ್ಲಿ ಕೆಲವೊಮ್ಮೆ ಬಂಡೆಗಳಿಗೆ ಸೇರಿದಂತೆ ಬಾರ್ನಕಲ್ ಗುಂಪುಗಳಿವೆ. ಅದಕ್ಕೂ ದೂರದಲ್ಲಿ ಅನೇಕ ಜಾತಿಯ ಮೃದ್ವಂಗಿಗಳು (ಮೊಲಸ್ಕ್ಸ್), ಟ್ಯುನಿಕೇಟುಗಳು, ಸ್ಪಾಂಜುಗಳು ಇವೆ. ಅತಿ ಎತ್ತರದ ಅಲೆಯ ಗುರುತಿನ ಬಳಿ ಇರುವ ನಿಬಿಡವಾದ ಕಲ್ಲುಗಳಲ್ಲಿ ವಿವಿಧರೀತಿಯ ವಲ್ಕವಂತ ಪ್ರಾಣಿಗಳೂ ಕೆಲವು ಭೌಗೋಳಿಕ ಹುಳುಹುಪ್ಪಟೆಗಳೂ ಇವೆ. ಇತರ ಬಂಡೆಗಳ ಕೆಳಭಾಗದಲ್ಲಿ ಅಗಣಿತವಾದ ಹುಳುಗಳೂ ಅಲೆಗಳು ಮಾಡಿದ ಸಣ್ಣ ಸಣ್ಣ ಹಳ್ಳಗಳಲ್ಲಿ ಸಮುದ್ರದ ಅನಿಮೋನಿಗಳೂ ಏಕಾಣು ಪ್ರಾಣಿಗಳೂ ಸ್ಪಾಂಜುಗಳೂ ಮತ್ತಿತರ ಪ್ರಾಣಿಗಳೂ ಇರಬಹುದು. ಮರಳು ತೀರದಲ್ಲಿ ಪಾಚಿಯ ಅಂಶ ಕಡಿಮೆ, ಏಕೆಂದರೆ ಮರಳಿಗೆ ಅದನ್ನು ಹಿಡಿದಿಡುವ ಶಕ್ತಿಯಿಲ್ಲ. ಆದರೂ ವಲ್ಕವಂತ ಜೀವಿಗಳು, ಹುಳುಗಳು ಮತ್ತು ಮೃದ್ವಂಗಿಗಳು ಇರುವುದು ಸಾಧ್ಯ. ಮಣ್ಣಿನ ತೀರದಲ್ಲೂ ಕೂಡ ಅಭದ್ರ ತಳಹದಿ ಇದ್ದು ಶೈವಲದ ಉತ್ಪತ್ತಿಗೆ ಹೆಚ್ಚಿನ ಅವಕಾಶ ಕೊಡುವುದಿಲ್ಲ. ಮರಳು ತೀರದಂತೆಯೇ ಇಲ್ಲಿಯೂ ಸಹ ಬಿಲ ತೋಡುವ ಜೀವಿಗಳೇ ಪ್ರಧಾನ. ಗುಟ್ಟಿನ ಸ್ಥಳಗಳಲ್ಲಿ ವಾಸ ಮಾಡುವ ಹುಳುಗಳು ಮೃದ್ವಂಗಿಗಳು ಮತ್ತು ವಲ್ಕವಂತ ಜೀವಿಗಳು ಇರುತ್ತವೆ. ಈ ಪ್ರದೇಶದಲ್ಲಿ ನಕ್ಷತ್ರ ಮೀನು (ಸ್ಟಾರ್ ಫಿಷ್), ಕಂಟಕಚರ್ಮಿ, ಸಮುದ್ರದ ಹೂಗಳು ಮತ್ತು ಸಮುದ್ರದ ಅನಿಮೋನ್‍ಗಳನ್ನು ಕಾಣಬಹುದು. 

	ಉಪತೀರವಲಯ (ಸಬ್‍ಲಿಟ್ಟೊರಲ್ ಜೊóೀನ್) : ಭೂತೀರವಲಯದಿಂದ ಸಾಗರದ ಕಡೆಯ ಭಾಗವೇ ಉಪತೀರವಲಯ. ಈ ವಿಸ್ತಾರವಾದ ಪ್ರದೇಶದ ಆಳ 50-200 ಮೀಟರುಗಳ ವರೆಗೆ ಇರುವುದುಂಟು. ತಳದ ಪ್ರದೇಶ ತೀರವಲಯಕ್ಕಿಂತ ಹೆಚ್ಚು ಸಮತಲವಾಗಿದೆ. ಅದು ಮರಳು, ಮಣ್ಣು ಮತ್ತು ಜೇಡಿಮಣ್ಣಿನಿಂದ ಕೂಡಿರುವುದಲ್ಲದೆ ಹೆಚ್ಚಾಗಿ ಮೃದ್ವಂಗಿ ಚಿಪ್ಪುಗಳು ಮತ್ತು ಕಲ್ಲುಗಳಿಂದ ಮಿಶ್ರಿತವಾಗಿವೆ. ತೀರವಲಯದ ಭಾಗ ಉಪತೀರವಲಯವಾಗಿ ಇಳಿಯುತ್ತದೆ. ಅಲ್ಲಿ ಅಧಿಕವಾಗಿ ಶೈವಲರಾಶಿ ಇರುವುದು ಸಾಧ್ಯ. ಅಲ್ಲಿಂದ 100 ಮೀಟರಿನ ಆಳದವರೆಗೆ ವಿವಿಧ ಜಲಲತೆಗಳೂ ನೀರ ಬಳ್ಳಿಗಳೂ ಇವೆ (ಕಾಲ್ಕೇರಿಯನ್ ವಾಟರ್ ವೀಡ್ಸ್). ಇದಾದ ಅನಂತರ ಬ್ಯಾಕ್ಟೀರಿಯಾ ಸಸ್ಯಜೀವಿಗಳೂ ಇವೆ. ಈ ವಲಯದ ತಳದಲ್ಲಿ ಫೋರಾಮಿನಿಫೆರ ಜಾತಿಯ ಏಕಾಣುಜೀವಿಗಳು ಅಸಂಖ್ಯಾತ ಗಣನೆಯಲ್ಲಿ ತುಂಬಿವೆ. ಇದರ ಜೊತೆಗೆ ಅಲ್ಲಿ ಅನೇಕ ಸ್ಪಾಂಜುಗಳು ಇದ್ದು ಅವು ಇನ್ನು ಕೆಲವು ಸಣ್ಣ ಪ್ರಾಣಿಗಳಿಗೆ ಆಶ್ರಯ ಸ್ಥಾನವಾಗಿದೆ. ಸಮುದ್ರ ಅರ್ಚಿನ್‍ಗಳು, ಸಮುದ್ರ ಸೌತೆಗಳು (ಸೀಕ್ಯುಕುಂಬರ್ಸ್), ಸಮುದ್ರ ದೋತೃಲಗಳು (ಕ್ರೈನಾಯಿಡ್ಸ್), ಪೆಡಸು ನಕ್ಷತ್ರಗಳು (ಬ್ರಿಟಲ್ ಸ್ಟಾರ್ಸ್), ಕುಟುಕು ಕಣವಂತಗಳು (ಸಿಯಲೆಂಟರೇಟ್ಸ್), ಹುಳುಗಳು(ವಮ್ರ್ಸ್), ಮೃದ್ವಂಗಿಗಳು ಮತ್ತಿತರ ವಲ್ಕವಂತ ಜೀವಿಗಳು ಇವೆ. ಈ ವಲಯದಲ್ಲಿ ಆಹಾರವನ್ನು ಸಿದ್ಧಪಡಿಸುವ ಕೆಲವು ಸಸ್ಯಗಳಿದ್ದರೂ ಬಹುತೇಕ ಪ್ರಾಣಿಗಳು ತಮ್ಮ ಬದುಕಿಗಾಗಿ ಮಾಂಸಾಹಾರಿಗಳಾಗಿವೆ ; ಇಲ್ಲವೆ ಪ್ರಯತ್ನದಿಂದ ಆಹಾರ ಸಂಪಾದಿಸುತ್ತವೆ. ಈ ವಿಸ್ತøತವಾದ ತಳದ ಸಸ್ಯವರ್ಗದ ಮೇಲ್ಭಾಗದಲ್ಲಿ (ನೆರಿಟಿಕ್) ಪ್ರಾಂತ್ಯಭಾಗವಿದೆ. ಇಲ್ಲಿ ಚುರುಕಾದ ಮೀನುಗಳೂ ತೇಲುವ (ಪ್ಲಾಂಕ್‍ಟನ್) ಪ್ರಾಣಿಗಳ ಗುಂಪೂ ಇವೆ. ಈ ಗುಂಪಿನ ಬಲು ಭಾಗ ಶೈವಲ. ಇದೇ ಸಾಗರದ ಆಹಾರಚಕ್ರಕ್ಕೆ ಆಧಾರ. ಈ ವಲಯದಲ್ಲಿ ಕಾಂಟಿನೆಂಟಲ್ ಶೆಲ್ಫ್ ಮೇಲ್ಭಾಗದಲ್ಲಿ ವ್ಯಾಪಾರೋದ್ಯಮಕ್ಕೆ ಒದಗುವ ಮೀನುಗಳು ದೊರಕುತ್ತವೆ. 

	ಮಧ್ಯವಲಯ (ಆರ್ಕಿಬೆಂಥಿಕ್ ಜೊóೀನ್) : ಈ ವಲಯದ ಪ್ರಾದೇಶಿಕ ವಿಸ್ತಾರ 200-2000 ಮೀಟರ್ ಆಳದವರೆಗಿನ ಭಾಗ. ಕಾಂಟಿನೆಂಟಲ್ ಶೆಲ್ಫ್ ಸಾಗರದ ಬಹು ಆಳಕ್ಕೆ ಇಳಿಯುವಲ್ಲಿ ಇದು ಆರಂಭವಾಗುತ್ತದೆ. 300 ಮೀಟರುಗಳ ಕೆಳಗೆ ಕೆಂಪು ಮಿಶ್ರಿತ ಬೆಳಕು ಸಾಧಾರಣ. ಆದರೆ ನೀರಿನ ಭಾರದ ಒತ್ತಡ ಚದರ ಅಂಗುಲಕ್ಕೆ 400 ಪೌಂಡಿನಷ್ಟು. ನೀರಿನ ಉಷ್ಣತೆ ಮಾತ್ರ ಸಮಧಾತುವಾಗಿರುತ್ತದೆ. ಶೈವಲಯ ಬೆಳೆವಣಿಗೆಗೆ ಸಾಕಷ್ಟು ಬೆಳಕಿಲ್ಲದಿರುವುದರಿಂದ ಮೀನು ಮತ್ತು ಇತರ ಜಲಚರ ಪ್ರಾಣಿಗಳು ತಮ್ಮ ಆಹಾರಕ್ಕೆ ಮೇಲಿಂದ ಬೀಳುವ ಆಹಾರವಸ್ತುಗಳನ್ನು ಅವಲಂಬಿಸಿರಬೇಕು. ಇಲ್ಲವೇ ಮಾಂಸಾಹಾರಿಗಳಾಗಿರಬೇಕು. ತಳಭಾಗದಲ್ಲಿ ಅನೇಕ ಅಡಿಗಳ ಉದ್ದವಿರುವ ಬೃಹದಾಕಾರದ ಸ್ಪಾಂಜುಗಳು ಇವೆ. ಇವುಗಳಲ್ಲಿ ಹಲವು ಪ್ರಾಣಿಗಳಿಗೆ ಹಿಡಿತಕ್ಕೆ ಅನುಕೂಲವಾಗುವಂತೆ ಊರುಗೋಲು ಆಸರೆಗಳಿವೆ. ಕಂಟಕಚರ್ಮಿಗಳು (ಎಕಿನೊಡಮ್ರ್ಸ್), ಕೆಂಪುಮೀನು, ಸಮುದ್ರ ಸೌತೆ, ನಕ್ಷತ್ರ ಮೀನು, ಪೆಡಸುನಕ್ಷತ್ರಗಳು ಯಥೇಚ್ಛವಾಗಿವೆ. ಬ್ರೇಕಿಯಾಪೋಡಾಗಳೂ ಚಿಪ್ಪು ಮೃದ್ವಂಗಿಗಳೂ ಇವೆ. 2000 ಮೀಟರಿನ ಆಳದ ಸಮೀಪದಲ್ಲಿ ಎಂದರೆ ಈ ವಲಯದ ಎಲ್ಲೆಯಲ್ಲಿ ನೀರಿನ ಉಷ್ಣತೆ ಅದೇ ಮಟ್ಟದಲ್ಲಿದ್ದು ಬೆಳಕು ಮಾತ್ರ ಇರುವುದಿಲ್ಲ. ನೀರಿನ ಭಾರದ ಒತ್ತಡ ಪ್ರತಿ ಚದರ ಇಂಚಿಗೆ 1 ಟನ್ನಿನಷ್ಟು ಇದೆ. ಇಲ್ಲಿ ವೈವಿಧ್ಯಮಯ ಸ್ಪಾಂಜುಗಳಿವೆ. ಅವನ್ನು ಆಶ್ರಯಿಸಿ ಮತ್ತಿತರ ಸಣ್ಣ ಸಣ್ಣ ಜೀವರಾಶಿಗಳು, ಮತ್ತು ಪಿಕ್ನೊಗೋನಿಡಗಳು ತಮ್ಮ ಓರೆಯಾದ ಹರಡಿದ ಪಾದಗಳಿಂದ ನುಣುಪಾದ ನೆಲದ ಮೇಲೆ ಓಡಾಡುತ್ತವೆ. ಇಲ್ಲಿನ ಜೀವರಾಶಿಗಳೆಲ್ಲ ತಮ್ಮ ಶರೀರಗಳಿಂದಲೇ ಬೆಳಕನ್ನು ಬೀರುವುವು (ಬಯೊಲ್ಯೂಮಿನಿಸೆಂಟ್). 

	ಅಂತಿಮ ವಲಯ : ಈ ಕೊನೆಯ ವಲಯ 2000 ಮೀಟರಿನಿಂದ ಹೆಚ್ಚಿನ ಆಳಕ್ಕೆ ಎಂದರೆ ತಳವಿಲ್ಲದ ಬುಡಕ್ಕೆ ಇಳಿಯುತ್ತದೆ. ಇಲ್ಲಿನ ನೀರು 00 ಸೆಂ.ಗ್ರೇ. ಗಿಂತ ಸ್ವಲ್ಪ ಹೆಚ್ಚು ಬಿಸಿಯಾಗಿದೆ. ಒತ್ತಡ ಮಾತ್ರ ಅತಿ. ಇಲ್ಲಿ ಅದ್ಭುತವೂ ವಿಚಿತ್ರವೂ ಆದ ಮಾಂಸಹಾರಿ ಮೀನುಗಳು ಇವೆ. ಅವುಗಳ ಶರೀರ ಸಣ್ಣದು. ಆದರೆ ತೆರೆದ ಬಾಯಿ ದೊಡ್ಡದು. ಇವುಗಳಿಗೆ ದೀರ್ಘವಾದ ಸ್ವಯಂಪ್ರಕಾಶಿತ ಅವಯವಗಳಿವೆ. ತಳ ಮೃದುವಾಗಿ ಜಾರುವುದು. ಈ ಮೃದುತಳದಲ್ಲಿ ನಿಲ್ಲಲು ಪ್ರಾಣಿಗಳಿಗೆ ಒಂದು ವಿಧವಾದ ಜಾಣ್ಮೆ ಇದೆ. ಇಲ್ಲಿ ಅನೇಕ ನಾಟಿಕೊಂಡಿರುವ ಪ್ರಾಣಿಗಳು, ಹವಳಗಳು, ಬ್ರಯೋಜೋವಗಳು, ಸಮುದ್ರೋದ್ಭಲಗಳು (ಕ್ರೀನಾಯ್ಡ್ಸ್), ಸಮುದ್ರ ಪೆನ್ನುಗಳು, ಟ್ಯೊನಿಕೇಟುಗಳು ಇವೆ. ಜೊತೆಗೆ ಸಮುದ್ರದ ಸೌತೆಗಳು ಮೃದ್ವಂಗಿಗಳು ಪಿಕ್ನಿಗೋನಿಡಗಳು ದೀರ್ಘವಾದ ಏಡಿಗಳೂ ಉಂಟು. ಕಡೆಯ ಈ ಎರಡು ವಲಯಗಳ ಆಚೆ ಇರುವುದೇ ಸಾಗರ ಪ್ರಾಂತ್ಯ, ನೆಕ್ಟಾನಿಕ್ ಮತ್ತು ಪ್ಲಾಂಕ್ಟಾನಿಕ್ ರೂಪದ ತೆರೆದ ಸಮುದ್ರ. 

	ಜೀವಿ ಸಂಖ್ಯೆಗಳು (ಪಾಪುಲೇಷನ್ಸ್) : ವಾಸ್ತವವಾಗಿ ಜೀವಿಸಂಖ್ಯೆಯ ಪರಿಸರವಿಜ್ಞಾನ ಬೆಳೆವಣಿಗೆಗೆ ಬೇಕಾದ ಆಂತರಿಕ ಸಂಬಂಧಗಳು ಮತ್ತು ಮಿತಿಗಳ ಅಭ್ಯಾಸ. ಸ್ಥೂಲವಾಗಿ ಹೇಳುವುದಾದರೆ ಇದು ಜೀವಿಸಂಖ್ಯೆಯ ಗುಣಸ್ವಭಾವವನ್ನು ಅಭ್ಯಸಿಸುವ ವಿಜ್ಞಾನ. ಪ್ರತಿಯೊಂದು ಜೀವಿಸಮುದಾಯಕ್ಕೂ ಆಂತರಿಕ ಸಂಬಂಧಗಳ ಸಮಸ್ಯೆ ಇದೆ. ಯಾವುದೇ ನೈಸರ್ಗಿಕ ಜೀವಿಸಮುದಾಯದಲ್ಲಿ ಪ್ರಾಣಿಗಳೂ ಸಸ್ಯಗಳು ಸಮತೂಕವಾಗಿವೆ. ಯಾವುದೇ ಒಂದು ಗುಂಪಿನ ಹೆಚ್ಚಿನ ಬೆಳೆವಣಿಗೆಯನ್ನು ನಿಸರ್ಗ ಸಾಮಾನ್ಯವಾಗಿ ವಿರೋಧಿಸುತ್ತವೆ. ಈ ವಿರೋಧ ದಾಳಿಕಾರರ ಸಂಖ್ಯೆಯ ಬೆಳೆವಣಿಗೆಯಿಂದಿರಬಹುದು ; ಆಹಾರದ ಅಭಾವದಿಂದಿರಬಹುದು; ಅಥವಾ ರೋಗಗಳಿಂದಿರಬಹುದು ಇಂಥ ಕಾರಣಗಳಿಂದ ಸಂಖ್ಯೆ ಪರಿಸರದ ಧಾರಣಶಕ್ತಿಯ ಅಂತರದಲ್ಲಿಯೇ ಇರುತ್ತದೆ. ಎಷ್ಟೋ ವೇಳೆ ಈ ಮುಖ್ಯ ಸಮತೂಕ ಮಾನವನ ಕೈವಾಡದಿಂದ ತಲೆಕೆಳಗಾಗಬಹುದು. ಅಂಥ ಸಂದರ್ಭಗಳಲ್ಲಿ ಕೆಲವು ಜಾತಿಯ ಪ್ರಾಣಿ ಜೀವಿಗಳು ತಮ್ಮ ನೈಸರ್ಗಿಕ ಅಂಶಗಳ ಮಿತಿ ಮಾಯವಾಗುವುದರಿಂದ ಅತಿಯಾಗಿ ಅಭಿವೃದ್ಧಿಯಾಗಬಹುದು. ಇದರ ಫಲಿತಾಂಶವಾಗಿ ಹೊಸ ಸಮತೂಕ ಏರ್ಪಡುತ್ತದೆ. ಆದರೆ ಅದೇ ಕಾಲದಲ್ಲಿ ಒಟ್ಟು ಜೀವಿಸಮುದಾಯ ವ್ಯವಸ್ಥೆಯೇ ಬುಡಮೇಲಾಗುತ್ತದೆ. 

	ಜೀವಿಗಳ ಸಂಖ್ಯೆಯ ಬೆಳೆವಣಿಗೆ : ನೈಸರ್ಗಿಕ ಪರಿಸ್ಥಿತಿಯಲ್ಲಿ ಜೀವಿಗಳ ಸಂಖ್ಯೆಯ ಬೆಳೆವಣಿಗೆಯನ್ನು ಅಳೆಯುವುದು ಕಷ್ಟ.. ಆದ್ದರಿಂದ ಬೇಕಾದ ಮಾಹಿತಿಗಳನ್ನು ಪ್ರಯೋಗಾಲಯಗಳಲ್ಲಿ ಹತೋಟಿಗೊಳಗಾದ ಪರಿಸ್ಥಿತಿಯಿಂದ ನೋಡಿ ಪಡೆಯಲಾಗಿದೆ. ಏಕಾಣುಜೀವಿಗಳು ಡ್ರಾಸಾಫಿಲ ನೊಣ, ಬ್ಯಾಕ್ಟೀರಿಯ, ಹಿಟ್ಟು ದುಂಬಿ ಇತ್ಯಾದಿಗಳ ಅಭ್ಯಾಸ ಮಾಡಲಾಗಿದೆ. ಇಂಥ ಪರಿಮಿತ ಪರಿಸ್ಥಿತಿಯಲ್ಲಿ ಬಾಲ್ಯಾವಸ್ಥೆಯ ಬೆಳೆವಣಿಗೆ ಬಲು ನಿಧಾನ. ಮರಿ ಹಾಕುವ ಜೀವಿಗಳ ಸಂಖ್ಯೆ ಹೆಚ್ಚಿದಂತೆಲ್ಲ ಜೀವಗಣತಿಯಲ್ಲಿ ಜೀವಿಗಳ ಸಂಖ್ಯೆ ಅಧಿಕವಾಗಿ ಮೇಲ್ಮಟ್ಟವನ್ನು ಮುಟ್ಟಿ ಸಮತೂಕವನ್ನು ಪಡೆಯುತ್ತವೆ. ಬೆಳೆವಣಿಗೆಯನ್ನು ರೇಖಾಚಿತ್ರದ ಮೂಲಕ ಗುರುತಿಸಿದರೆ S ಆಕಾರದ ವಕ್ರರೇಖೆ ಕಾಣುತ್ತವೆ. ಈ ರೀತಿಯ ವಕ್ರತೆಯನ್ನು ಅಥವಾ ವಕ್ರರೇಖೆಯನ್ನು ಸಿಗ್ಮಾಯಿಡ್ ವಕ್ರರೇಖೆ ಎಂದು ಹೇಳುತ್ತಾರೆ. ಇದು ಜೀವಿಗಳ ಸಂಖ್ಯೆಯ ಬೆಳೆವಣಿಗೆಯ ಮಾದರಿ ಗರಿಷ್ಠಾಂಶ ಅಥವಾ ಮೇಲಿನ ಮಿತಿ. ಮುಖ್ಯವಾಗಿ ಆಹಾರ, ಅವಕಾಶ, ಕೊಂದು ತಿನ್ನುವ ಚಟ, ರೋಗ ಅಥವಾ ಬದಲಾಯಿಸಿದ ಜೀವಾಧಾರವನ್ನು-ಇವು ಬೆಳೆವಣಿಗೆಯನ್ನು ಕುಂಠಿತಗೊಳಿಸಬಹುದು. ಪ್ರಯೋಗಶಾಲೆಯ ಪ್ರಯೋಗಗಳ ನೆರವಿಲ್ಲದೆಯೇ ಬಲು ಹಿಂದೆಯೇ ಮಾಲ್ತಸ್ ಎಂಬ ವಿಜ್ಞಾನಿ ಮಾನವಸಂಖ್ಯೆ ಜ್ಯಾಮಿತೀಯ ಪ್ರಮಾಣದಲ್ಲಿ (ಜೊಮೆಟ್ರಿಕ್ ಪ್ರೊಗ್ರೆಶ್ಯನ್) ಹೆಚ್ಚಿದರೆ ಆಹಾರ ಸರಬರಾಜು ಸಮಾಂತರ ಪ್ರಮಾಣದಲ್ಲಿ (ಎರಿತ್‍ಮೆಟಿಕ್ ಪ್ರೊಗ್ರೆಶ್ಯನ್) ರೀತಿಯಲ್ಲಿ ಹೆಚ್ಚುತ್ತದೆ ಎಂದು ಗಮನಿಸಿದ್ದ. ಜನಸಂಖ್ಯೆ, ಆಹಾರದ ಪೂರೈಕೆಗಿಂತ ಅಧಿಕವಾದಾಗ ಹಸಿವಿನ ಕಾರಣದಿಂದಾಗಿ ಜನಸಂಖ್ಯೆ ಕಡಿಮೆಯಾಗುತ್ತದೆ ಎಂದಿದ್ದ. ಇದು ಜೀವಿಸಂಖ್ಯೆಯ ಬೆಳೆವಣಿಗಯ ಚಿತ್ರಕ್ಕೆ ಸರಿಯಾಗಿ ಹೊಂದುತ್ತದೆ. ಆದರೂ ಮಾಲ್ತಸನ ಕಾಲಾನಂತರ ತಾಂತ್ರಿಕ ಬೆಳೆವಣಿಗೆಗಳು ಆಹಾರೋತ್ಪತ್ತಿಯ ಮೇಲ್ಮಿತಿಯನ್ನು ಹೆಚ್ಚಿಸುತ್ತ ಬಂದಿವೆ. ಮಾನವಸಂಖ್ಯೆಯೂ ಹಾಗೆಯೇ ಬೆಳೆಯುತ್ತ ಬಂದಿದೆ. ಹೀಗೆ ಮಿತಿಮೀರಿದ ಜನಸಂಖ್ಯೆಯುಳ್ಳ ಭಾರತ ಮಾಲ್ತಸನ ಅಭಿಪ್ರಾಯವನ್ನು ಸತ್ಯವಾಗಿ ಪ್ರತಿಬಿಂಬಿಸುತ್ತದೆ. ಇಂಥ ರಾಷ್ಟ್ರಕ್ಕೆ ಮಾಲ್ತಸನ ರಾಷ್ಟ್ರ ಎಂದು ಹೆಸರು. 

	ಧಾರಾಳದ ಏರುಪೇರುಗಳು (ಅಬಂಡೆನ್ಸ್ ಆಸಿಲೇಷನ್ಸ್) : ಒಂದು ಸಲ ತನ್ನ ಮಿತಿಯ ತುದಿಯನ್ನು ಮುಟ್ಟಿದ ಜೀವಿಸಂಖ್ಯೆ ಅಲ್ಲಿಯೇ ಸ್ಥಿರವಾಗಿರಬೇಕೆಂಬ ನಿಯಮವಿಲ್ಲ. ಅದರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಋತುವಿನಿಂದ ಋತುವಿಗೆ ಹೆಚ್ಚು ಕಡಿಮೆ ಆಗಬಹುದು. ಕೆಲವೊಮ್ಮೆ ತತ್‍ಕ್ಷಣದ ಅಧಿಕ್ಯ ಕಾಣಬಹುದು ; ಅಥವಾ ಸಂಪೂರ್ಣ ನಾಶಕ್ಕೆ ಇಳಿಯಬಹುದು. ಹೆಚ್ಚಿನ ಏರುಪೇರುಗಳು ಅಷ್ಟು ಖಚಿತವಾಗಿ ಆಗಲಾರವಾದರೂ ಲೆಕ್ಕಾಚಾರದಲ್ಲಿ (ಅಂಕಿ ಅಂಶಗಳಲ್ಲಿ) ಧಾರಾಳದ ಏರುಪೇರುಗಳಾಗಿರುತ್ತವೆ. ಒಂದು ರೀತಿಯಲ್ಲಿ ಅತ್ಯಾಶ್ಚರ್ಯಕರವಾದ ಅಂಶವೆಂದರೆ ಜೀವಿಸಂಖ್ಯೆ ಒಂದು ಗೊತ್ತಾದ ಚಕ್ರದ ಗತಿಯಲ್ಲಿ ಏರಿಳಿಯುತ್ತದೆ. ಇದನ್ನು ಕೆಲವು ವನ್ಯಪ್ರಾಣಿಗಳ ಮತ್ತು ಪಕ್ಷಿಗಳ ದೃಷ್ಟ್ಟಾಂತರದಿಂದ ಕಂಡುಹಿಡಿಯಲಾಗಿದೆ. ಕೆನಡ ಪ್ರದೇಶದ ಹಡ್ಸನ್ ಕೊಲ್ಲಿಯಲ್ಲಿ ಬದಲಾಯಿಸುತ್ತಿರುವ ಮೊಲಗಳ ಸಂಖ್ಯೆಯನ್ನು ಅನೇಕ ವರ್ಷಗಳವರೆಗೆ ಹಡ್ಸನ್ ಬೇ ಕಂಪನಿಯವರೂ ಇತರರೂ ದಾಖಲೆ ಮಾಡಿಕೊಂಡಿದ್ದಾರೆ. ಈ ಚಕ್ರ 9 ಅಥವಾ 10 ವರ್ಷದ ಅಂತರದಲ್ಲಿ ಅಧಿಕವಾಗಿ ಏರಿರುವುದು ಕಂಡುಬಂದಿದೆ. ಹಾಗೆಯೇ ಮೊಲದ ಆಹಾರದ ಮೇಲೆ ವಿಶೇಷವಾಗಿ ಅವಲಂಬಿಸಿರುವ ಕೆನಡಾದ ಕಿರುಬಗಳು 9.7 ವರ್ಷದ ಅವದಿಯಲ್ಲೇ ತಮ್ಮ ಉತ್ಪತ್ತಿಯ ಪರಮಾವಧಿ ಸೇರಿರುವುದೂ ಗಮನಕ್ಕೆ ಬಂದಿದೆ. ಇದೇ ರೀತಿಯ ಚಕ್ರಗಳು ಇಲಿ, ಲಮ್ಮಿಂಗ್, ತೋಳ ಮತ್ತು ಕೆಲವು ಪಕ್ಷಿಗಳ ಬಗ್ಗೆಯೂ ಕಂಡುಬಂದಿವೆ. ಇಲ್ಲೆಲ್ಲ ಅವಧಿಗಳು ಬೇರೆ ಬೇರೆ. ಇದಕ್ಕೆ ಅನೇಕ ಊಹೆಗಳನ್ನು ಜನ ನೀಡಿದ್ದರೂ ಈ ಚಕ್ರಗಳ ಕಾರಣಗಳು ಸ್ಪಷ್ಟವಾಗಿಲ್ಲ. ಹುಟ್ಟಿನಿಂದ ಬಂದ ಸಮತೋಲ, ಸೂರ್ಯ ಬಿಂಬದ ಪ್ರಭಾವ, ವಿದ್ಯುತ್ ಪ್ರಭಾವ, ರೋಗರುಜಿನ, ಅತಿ ಒತ್ತಡದ ಪಾತ್ರ-ಇವು ಅವುಗಳಲ್ಲಿ ಮುಖ್ಯವಾದುವು. ಅತಿ ಬೆಳೆವಣಿಗೆಯ ಪರಿಣಾಮವಾಗಿ ಅಡ್ರಿನಲ್ ನಿರ್ನಾಳಗ್ರಂಥಿಯ ಕ್ರಿಯೆ ವಿಶೇಷವಾಗುತ್ತದೆ. ಇದರಿಂದ ಪ್ರಾಣಿಗಳು ಮನೋಘಾತಕ್ಕೆ ಒಳಗಾಗಿ ನಶಿಸುತ್ತವೆ ಎಂದು ತಿಳಿದಿದೆ. ಆಗ ಅವು ಬಹು ಸಂಖ್ಯೆಯಲ್ಲಿ ಸಾವಿಗೀಡಾಗುತ್ತವೆ ; ಅಲ್ಲದೆ ಫಲವತ್ತಾಗಿಯೂ ಇರುವುದಿಲ್ಲ. ಇಂಥ ಚಕ್ರಗಳು ಸ್ಪಷ್ಟವಾಗಿ ಅರ್ಥವಾಗದ ಅನೇಕ ಕಾರಣಾಂಶಗಳಿಂದ ಸಾಧ್ಯ ಎಂದು ಮಾತ್ರ ಈಗ ನಾವು ಕೊಡಬಹುದಾದ ವಿವರಣೆ. 

	ಪರಿಸರವಿಜ್ಞಾನ ಮತ್ತು ಸಂರಕ್ಷಣೆಯ ಕೆಲವು ಮುಖಗಳು : ಇಂದು ನಮ್ಮನ್ನು ಎದುರಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ಮುಖ್ಯವಾದವು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಶೇಖರಣೆ. ಮಣ್ಣು, ಖನಿಜ, ವನ್ಯಮೃಗ ಇವುಗಳ ಸಂರಕ್ಷಣೆ ನಮಗೆ ಮಾತ್ರವಲ್ಲ ನಮ್ಮ ಮುಂದಿನ ಜನಾಂಗಕ್ಕೂ ತುಂಬ ಆವಶ್ಯಕ. ಇಂಥ ಮುಖ್ಯ ಸಂಪನ್ಮೂಲಗಳನ್ನು ಬಳಸಿಕೊಳ್ಳದೆ ಇರುವುದು ಸಂರಕ್ಷಣೆ ಎಂಬ ಅಭಿಪ್ರಾಯ ಒಂದು ಕಾಲದಲ್ಲಿತ್ತು. ಈ ಪದದ ನಿಜವಾದ ಅರ್ಥ ನೈಸರ್ಗಿಕ ಸಂಪನ್ಮೂಲಗಳ ವ್ಯವಸ್ಥಿತ ಬಳಕೆ, ವೃಥಾ ನಾಶದ ತಡೆ, ಬೆಳೆವಣಿಗೆಗೆ ಅವಕಾಶ ನೀಡಿಕೆ ಎಂದಿದೆ. ಮರಗಳನ್ನು ಕಾಡಿನಿಂದ ಕಡಿದು ತರಬಹುದು. ಅದರೊಂದಿಗೆ ಮುಂದಿನ ಅಗತ್ಯಕ್ಕಾಗಿ ಮತ್ತೆ ಹೊಸ ಮರಗಳನ್ನು ಬೆಳೆಸಲು ಸಸಿಗಳನ್ನು ನೆಡಬೇಕು. ವನ್ಯಮೃಗಗಳನ್ನು ಬೇಟೆಯಾಡಬಹುದು. ಆದರೆ ಅವು ಪ್ರಕೃತಿ ವಲಯದಲ್ಲಿ ಸ್ವತಂತ್ರವಾಗಿ ಬದುಕಲು ವಾತಾವರಣವನ್ನು ಕಲ್ಪಿಸಬೇಕು. ಕೊಲ್ಲುವುದನ್ನು ಮಿತಿಗೊಳಿಸುವುದರಿಂದ, ವಾಸಿಸುವ ಗೂಡುಗಳನ್ನು ನಿರ್ಮಿಸುವುದರಿಂದ, ಅಭಾವಪೀಡಿತ ಕಾಲದಲ್ಲಿ ಆಹಾರವನ್ನು ಒದಗಿಸುವುದರಿಂದ, ಮರಿ ಹಾಕುವ ಕಾಲದಲ್ಲಿ ಸಂರಕ್ಷಣೆ ನೀಡುವುದರಿಂದ ವನ್ಯಪ್ರಾಣಿಗಳ ಸಂರಕ್ಷಣೆಯನ್ನು ಸಾಧಿಸಬಹುದು. ಸದ್ಯದಲ್ಲಿ ಸಂರಕ್ಷಣೆಯ ಅನೇಕ ಪ್ರಯತ್ನಗಳು ಇದರ ಹೊಣೆ ಹೊತ್ತಿರುವವರಿಗೆ ಪೂರ್ಣ ಮಾಹಿತಿ ಇಲ್ಲದಿರುವುದರಿಂದ ವಿಫಲವಾಗಿದೆ. ಸಂರಕ್ಷಣೆಗೆ ಅನೇಕ ವಿಧಾನಗಳಿವೆ. ಪ್ರಾಕೃತಿಕ ಭಾಗಗಗಳನ್ನೂ ಅಲ್ಲಿನ ಸಸ್ಯ ಪ್ರಾಣಿವರ್ಗಗಳನ್ನೂ ಕಾಪಾಡಬೇಕು. ನಮ್ಮ ನೆಲದ, ಕಾಡಿನ, ನೀರಿನ ಉಪಯೋಗವನ್ನು ಬುದ್ಧಿವಂತಿಕೆಯಿಂದ ನಡೆಸಬೇಕು. ಈ ಸಂಪನ್ಮೂಲಗಳನ್ನು ಕ್ರಮಬದ್ಧವಾಗಿ ಪರಿಸರವಿಜ್ಞಾನದ ಸೂತ್ರಗಳ ಬೆಳಕಿನಲ್ಲಿ ಕೈಗೊಳ್ಳಬೇಕು. 

	ಆಹಾರದ ಜಾಲದಲ್ಲಿ ಮಧ್ಯಪ್ರವೇಶ : ಮನುಷ್ಯ ಆಗಾಗ ಮಾಂಸಾಹಾರಿ ಪ್ರಾಣಿಗಳನ್ನು ನಿವಾರಿಸುತ್ತಾನೆ. ಇಂಥ ಅಭ್ಯಾಸ ಕೆಲವೊಮ್ಮೆ ಅಗೋಚರ ಪರಿಣಾಮಗಳಿಗೆ ಕಾರಣವಾಗುತ್ತದೆ. ಅರಿಜೋóನಾದ ಕೈಬಾಬ್ ಹುಲ್ಲುಗಾವಲಿನಲ್ಲಿ ನಡೆದ ಒಂದು ಐತಿಹಾಸಿಕ ದೃಷ್ಟಾಂತವಿದೆ. ಸಹಜಸ್ಥಿತಿಯಲ್ಲಿ ಈ ಶತಮಾನದ ಆರಂಭದಲ್ಲಿ 4000 ಜಿಂಕೆಗಳಿದ್ದುವು. ಆ ಸ್ಥಳದಲ್ಲಿ ಅದರ ಸಂಖ್ಯೆ ಒಂದು ಪರಿಮಿತಿಯಲ್ಲಿತ್ತು. ಅದಕ್ಕೆ ಕಾರಣ ತೋಳಗಳು, ಕೊಯೋಟ್ ದೊಡ್ಡ ಬೆಕ್ಕು ಮತ್ತು ಪ್ಯೂಮ ಸಿಂಹಗಳು. 1905ರ ಸುಮಾರಿನಲ್ಲಿ ಜಿಂಕೆಯ ಸಂಖ್ಯೆಯನ್ನು ಹೆಚ್ಚಿಸಲು ಆ ಮಾಂಸಾಹಾರಿಗಳನ್ನು ಕೊಲ್ಲುವ ಯತ್ನ ತೀವ್ರವಾಗಿ ನಡೆಯಿತು. ಜಿಂಕೆಯ ಗಣತಿ 40,000 ಕ್ಕೇರಿತು. 1920ರಲ್ಲಿ ಮೊದಲ ಅಪಾಯ ಕಾಣಿಸಿಕೊಂಡಿತು. ಸಂಖ್ಯೆ 60,000ಕ್ಕೇರಿದಾಗ ಕೆಲವು ಪ್ರಾಣಿಗಳು ಹಸಿವಿನಿಂದ ಸಾಯುವುದು ಗೋಚರಿಸಿತು. ಆಹಾರ ದೊರಕದೆ ಮುಂದಿನ ಎಚ್ಚರಿಕೆಯನ್ನು ಗಣಿಸದೆ ಸಂಖ್ಯೆಯನ್ನು ಹತೋಟಿಯಲ್ಲಿಡುವ ಯಾವ ಪ್ರಯತ್ನವೂ ಮಾಡಲಿಲ್ಲ. ಇದರಿಂದ ಇದರ ಸಂಖ್ಯೆ ಬೆಳೆದಿದ್ದುದರಿಂದ ಮುಂದಿನೆರಡು ವರ್ಷ ಋತುಗಳಲ್ಲಿ 6% ರಷ್ಟು ಪ್ರಾಣಿಗಳು ಹಸಿವಿನಿಂದ ಸತ್ತವು. 1925ರಲ್ಲಿ ಸಂಖ್ಯೆ 40,000 ಕ್ಕಿಳಿಯಿತು. 1939ರಲ್ಲಿ 10,000ಕ್ಕೆ ಮಾತ್ರ ನಿಂತಿತು. ಕಾಡೆಲ್ಲ ಹಾಳಾಗಿತ್ತು. ಕೆಲವೇ ಪ್ಯೂಮಗಳು ಇದ್ದುವು. 

	ಹೊಸ ಪ್ರಾಣಿಗಳ ಪ್ರವೇಶ : ಒಂದು ಪ್ರದೇಶದ ಒಳಕ್ಕೆ ಹೊಸ ಜಾತಿಯ ಪ್ರಾಣಿಗಳನ್ನು ಸೇರಿಸುವುದು ಕೆಲವು ಪ್ರಾಣಿಗಳನ್ನು ಅಲ್ಲಿಂದ ತೆಗೆಯುವಷ್ಟೇ ಕೆಟ್ಟ ಪರಿಣಾಮ ಬೀರುತ್ತದೆ. 1800ರ ಸುಮಾರಿನಲ್ಲಿ ಒಬ್ಬ ಆಂಗ್ಲಪ್ರಜೆ ಆಸ್ಟ್ರೇಲಿಯ ದೇಶಕ್ಕೆ 5 ಮೊಲಗಳನ್ನು ತನ್ನ ಬೇಟೆಯ ಮನೋರಂಜನೆಗಾಗಿ ಪ್ರವೇಶಗೊಳಿಸಿದ. ಈ ಮೊಲಗಳು ತಮಗೆ ಯಾವ ಮೃತ್ಯುಕಾರಕ ಪ್ರಾಣಿಗಳ ಭಯವೂ ಇಲ್ಲದೆ ಅಡೆತಡೆಯಿಲ್ಲದೆ ಅತಿ ವೇಗವಾಗಿ ಅಭಿವೃದ್ಧಿಗೊಂಡು ದೇಶವನ್ನೆಲ್ಲ ಆಕ್ರಮಿಸಿದವು. 1920ರಲ್ಲಿ ದೇಶದ ಮುಕ್ಕಾಲು ಭಾಗದಲ್ಲಿ ಅವು ಗೋಚರಿಸಿಕೊಂಡು ಸಸ್ಯ ಸಂಪತ್ತನ್ನು ಹಾಳು ಮಾಡಿ ಕುರಿಯ ಬೆಳೆವಣಿಗೆಗೆ ಘಾತವನ್ನುಂಟುಮಾಡುವ ಭಯ ಹುಟ್ಟಿಸಿದುವು. ಸಂಯುಕ್ತ ಸಂಸ್ಥಾನಗಳಲ್ಲಿ ಆಂಗ್ಲ ಗುಬ್ಬಚ್ಚಿಗಳ ಆಮದು ಸ್ಥಳೀಯ ಪಕ್ಷಿಗಳ ಮೇಲೆ ಅನಾಹುತ ಉಂಟುಮಾಡಿತು. ಅದು ಮೇಲೆ ಬೀಳುವ ಪ್ರಾಣಿ. ಅದಕ್ಕೆ ಗೂಡುಗಳನ್ನು ಕಟ್ಟುವ ಸಾಮಥ್ರ್ಯ ಇದೆ. ಹೀಗೆ ಸ್ಥಳೀಯಪಕ್ಷಿಗಳೊಂದಿಗೆ ಸ್ಪರ್ಧಿಸಿ ಗೆದ್ದು ತನ್ನ ಸ್ಥಾನವನ್ನು ಗಳಿಸಿಕೊಂಡಿತು. ಅಲ್ಲದೆ ಅದಕ್ಕೆ ನೈಸರ್ಗಿಕ ಶತ್ರುಗಳೂ ಇರಲಿಲ್ಲ. ಈಗ ಅದು ತಾನು ಆರಿಸಿಕೊಂಡ ಪ್ರದೇಶದಲ್ಲಿ ಒಂದು ರೀತಿಯ ಸಮತೋಲವನ್ನು ಪಡೆದಿದೆ. ಯೂರೋಪಿನ ಕೊರೆಯುವ ಕೀಟ (ಕಾರ್ನ್‍ಬೋರರ್) ಜಿಪ್ಸಿ ಪತಂಗ ಮತ್ತಿತರ ತೊಂದರೆ ನೀಡುವ ಕೀಟಗಳು ಯೂರೋಪಿಗೆ ಆಕಸ್ಮಿಕವಾಗಿ ಬಂದವು. ಅವು ಮೊದಮೊದಲು ಭಾರಿ ಪಿಡುಗಾಗಿ ಪರಿಣಮಿಸಿದುವು. ಆದರೆ ಈಚೆಗೆ ಕಡಿಮೆಯಾಗಿವೆ. ಏಕೆಂದರೆ ರಾಷ್ಟ್ರಕ್ಕೆ ತರುವ ಸಸ್ಯಗಳನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. 

	ನದಿಗಳ, ಝರಿಗಳ ನೀರನ್ನು ಕೆಡಿಸುವುದು ಪ್ರಾಣಿವರ್ಗ ಎದುರಿಸುತ್ತಿರುವ ದೊಡ್ಡ ಸಮಸ್ಯೆ. ಕೈಗಾರಿಕೆ, ನಗರಗಳ ಬೆಳೆವಣಿಗೆ. ಸಾಂಸ್ಕøತಿಕ ಸ್ವರೂಪಗಳ ಬದಲಾವಣೆ ನೀರಿನ ಉಪಯೋಗವನ್ನು ಹೆಚ್ಚಿಸಿದೆ. ನಮಗೆ ನೀರಿನ ಅಗತ್ಯ ಹೆಚ್ಚಾಗುತ್ತಿರುವಂತೆ ದೊರಕುವ ಒಳ್ಳೆಯ ನೀರಿನ ಮೂಲಗಳೂ ಕಡಿಮೆಯಾಗುತ್ತಿವೆ. ಜೊತೆಗೆ ನದಿಗಳ,ಬಂದರುಗಳ ನೀರು ಕಲುಷಿತವಾಗುತ್ತಿದೆ. ಶುದ್ಧವಾದ ಕುಡಿಯುವುದಕ್ಕೆ ಉಪಯೋಗಿಸುವ ನೀರನ್ನು ಕಾರ್ಖಾನೆ ಕಶ್ಮಲಗಳು ಕೆಡಿಸಿ ಜನಾರೋಗ್ಯಕ್ಕೆ ಮಾರಕವಾಗಿದೆ. ಕೈಗಾರಿಕಾವರ್ಗ ವಿಜ್ಞಾನ, ಆರೋಗ್ಯಶಾಖೆ ಇವೆಲ್ಲ ಸಹಕರಿಸಿದರೆ ಸ್ಥಿತಿಗಳನ್ನು ತಿದ್ದಿಕೊಳ್ಳಬಹುದು. ಸದ್ಯಕ್ಕೆ ಬಹಳ ಪ್ರಯತ್ನವೇನೋ ನಡೆಯುತ್ತಿದೆ. ಆದರೆ ಹೊರ ನೀರಿಗೆ ಸೇರುತ್ತಿರುವ ಕೊಳಚೆಯ ಪ್ರಮಾಣ ಪ್ರಗತಿಯನ್ನು ಕಷ್ಟಕರವಾಗಿ ಮಾಡಿ ನಿಧಾನಿಸುತ್ತಿದೆ. 

	ವ್ಯಾಲೇಸ್ ಅವರ ಪ್ರಾಣಿ ಭೌಗೋಳಿಕ ಪ್ರದೇಶಗಳು : 1859ರಲ್ಲಿ ಡಾರ್ವಿನ್ನನ ಬೃಹದ್ಗ್ರಂಥ ಹೊರಬಿದ್ದಾಗ ವ್ಯಾಲೇಸ್ ಎಂಬಾತ ಪ್ರಪಂಚವನ್ನು ಮರದ ಮೇಲೆ ಕೂರುವ ಪಕ್ಷಿಗಳ ಅಭ್ಯಾಸದ ಆಧಾರದ ಮೇಲೆ ಪ್ರಾಣಿವರ್ಗದ ಭಾಗಗಳನ್ನಾಗಿ ವಿಂಗಡಿಸಲು ಯತ್ನಿಸಿದ. 1876ರಲ್ಲಿ ಇವನು ಪ್ರಾಣಿಗಳ ಭೌಗೋಳಿಕ ಹಂಚಿಕೆ ಎಂಬ ತನ್ನ ಗ್ರಂಥದಲ್ಲಿ ಪ್ರಪಂಚವನ್ನು ಪ್ರಾಣಿ ಭೌಗೋಳಿಕ ಭಾಗಗಳಾಗಿ ಇಂದು ಕಂಡು ಬರುವಂತೆ ವಿಭಾಗ ಮಾಡಿದ. ಇಂದಿನ ಪ್ರಾಣಿವರ್ಗದ ಹಂಚಿಕೆಯ ರೀತ್ಯ ಭಾಗಗಳ ಸ್ವರೂಪವನ್ನು ರೂಪಿಸಿದ. ನಿಆರ್‍ಕ್ಟಿಕ್ (ಉತ್ತರ ಅಮೆರಿಕ) ಪೇಲ್‍ಆರ್‍ಕ್ಟಿಕ್ (ಯೂರೋಪ್, ಉತ್ತರ ಆಫ್ರಿಕ ಮತ್ತು ಏಷ್ಯದ ಬಹುಭಾಗ), ಇಥಿಯೊಪಿಯನ್ (ಸಹರಾ ಮರುಭೂಮಿಯ ದಕ್ಷಿಣ ಭಾಗವನ್ನೊಳಗೊಂಡ ಆಫ್ರಿಕ), ಓರಿಯೆಂಟಲ್ (ಭಾರತ, ಈಶಾನ್ಯ ಏಷ್ಯ ಪೂರ್ವ ಇಂಡೀಸ್ ದ್ವೀಪಗಳ ಪಶ್ಚಿಮ ಭಾಗಗಳು, ಇತರ ಪರ್ಯಾಯ ಭಾಗ), ಆಸ್ಟ್ರೇಲಿಯನ್ (ಆಸ್ಟ್ರೇಲಿಯ, ನ್ಯೂಗಿನಿ ಮತ್ತು ನೆರೆಹೊರೆಯ ದ್ವೀಪಗಳು), ನಿಯೊಟ್ರಾಪಿಕಲ್ (ಮಧ್ಯ ಮತ್ತು ದಕ್ಷಿಣ ಅಮೆರಿಕ ಸೇರಿರುವ ಭಾಗಗಳು)-ಇವು ಈ ಭಾಗಗಳು.

	ಈಚೆಗೆ ಈ ಪ್ರದೇಶಗಳ ವರ್ಗವಿಭಾಗ ಸ್ವಲ್ಪ ಬದಲಾವಣೆ ಹೊಂದಿದೆ. ಈಗಿನ ಸಂಶೋಧಕರು ಪೇಲಾರ್‍ಕ್ಟಿಕ್ ಮತ್ತು ನಿಆರ್‍ಕ್ಟಿಕ್‍ಗಳನ್ನು ಒಟ್ಟುಗೂಡಿಸಿ ಹೋಲಾರ್‍ಕ್ಟಿಕ್ ಎಂದು ಕರೆದಿದ್ದಾರೆ. ಮಡಗಾಸ್ಕರ್ ಅನ್ನು ಮಲಗಾಸಿ ಎಂದು ವಿಶಿಷ್ಟ ಭಾಗವಾಗಿ ಪರಿಗಣಿಸಿದ್ದಾರೆ. ಆಸ್ಟ್ರೇಲಿಯ ವಿಭಾಗದಿಂದ ಪಾಲಿನೇಸಿಯನ್ ಮತ್ತು ಹವಾಯಿಯನ್ ದ್ವೀಪಗಳನ್ನು ಬೇರ್ಪಡಿಸಿದ್ದಾರೆ. 
(ಎಂ.ಡಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ